ಬೇಸಿಗೆ ಬಂತಂದ್ರೆ ಎಲ್ಲಿ ನೋಡಿದ್ರೂ ಸೊಳ್ಳೆಗಳ ಕಾಟ. ಸೊಳ್ಳೆ ಕಾಯಿಲ್ ಹಾಕಿದ್ರೂ ಪ್ರಯೋಜನವಾಗುವುದಿಲ್ಲ. ರಾತ್ರಿ ನಿದ್ದೆಯನ್ನೂ ಕೊಡದ ಸೊಳ್ಳೆಗಳನ್ನು ಓಡಿಸೋದೇ ಬಹುದೊಡ್ಡ ಸವಾಲು. ಎಲ್ಲೋ ಮೂಲೆಯಲ್ಲಿ ಅಡಗಿಕೊಂಡು ಲೈಟ್ ಆಫ್ ಆದಾಕ್ಷಣ ಬಂದು ಕಚ್ಚಿ ರಕ್ತ ಹೀರೋ ಸೊಳ್ಳೆಗಳನ್ನು ಓಡಿಸಲು ಕೆಲವೊಂದು ಮನೆ ಮದ್ದುಗಳಿವೆ. ಅವ್ಯಾವುದು ಅಂತ ನೋಡೋಣ.
ಬೆಳ್ಳುಳ್ಳಿ ರಸ : ಮೊದಲನೆಯದಾಗಿ ಸೊಳ್ಳೆಗಳನ್ನು ಓಡಿಸಲು ನೀವು ಬೆಳ್ಳುಳ್ಳಿಯನ್ನು ಬಳಸಬಹುದು. ಕೆಲವು ಬೆಳ್ಳುಳ್ಳಿ ಎಸಳುಗಳನ್ನು ಜಜ್ಜಿ ನೀರಿನಲ್ಲಿ ಕುದಿಸಿ. ಅದನ್ನು ಸ್ಪ್ರೇ ಬಾಟಲಿಯಲ್ಲಿ ತುಂಬಿಸಿ ಮತ್ತು ಕೋಣೆಯಲ್ಲಿ ಸಿಂಪಡಿಸಿ. ಹೀಗೆ ಮಾಡುವುದರಿಂದ ಕೋಣೆಯಲ್ಲಿ ಇರುವ ಎಲ್ಲಾ ಸೊಳ್ಳೆಗಳು ಓಡಿಹೋಗುತ್ತವೆ.
ಕಾಫಿ : ನೀವು ಕಾಫಿಯನ್ನು ಬಳಸಿ ಸೊಳ್ಳೆಗಳನ್ನು ಓಡಿಸಬಹುದು. ನಿಂತ ನೀರಲ್ಲಿ ಸೊಳ್ಳೆಗಳು ಮೊಟ್ಟೆ ಇಡಬಹುದು ಎಂದೆನಿಸಿದ್ರೆ ಅಲ್ಲಿ ಕಾಫಿ ಪುಡಿ ಅಥವಾ ಕಾಫಿಯನ್ನು ಅಲ್ಲಿ ಹಾಕಿ. ಹೀಗೆ ಮಾಡುವುದರಿಂದ ಎಲ್ಲಾ ಸೊಳ್ಳೆಗಳು ಮತ್ತು ಅವುಗಳ ಮೊಟ್ಟೆಗಳು ನಾಶವಾಗುತ್ತವೆ.
ಪುದೀನಾ : ಸೊಳ್ಳೆ ಓಡಿಸಲು ಮೂರನೆಯ ವಸ್ತು ಅಂದ್ರೆ ಪುದೀನಾ. ಪುದೀನಾ ಪರಿಮಳದಿಂದ ಸೊಳ್ಳೆಗಳು ಕೆರಳುತ್ತವೆ. ಪುದೀನಾ ಎಣ್ಣೆಯನ್ನು ಮನೆಯ ತುಂಬೆಲ್ಲಾ ಹಚ್ಚಿದರೆ ಸೊಳ್ಳೆಗಳು ಓಡಿಹೋಗುತ್ತವೆ.
ಕಹಿಬೇವಿನ ಎಣ್ಣೆ : ಸೊಳ್ಳೆಗಳನ್ನು ಓಡಿಸುವಲ್ಲಿ ಬೇವಿನ ಎಣ್ಣೆ ಕೂಡ ಸಹಕಾರಿಯಾಗಿದೆ. ಬೇವಿನ ಎಣ್ಣೆಯನ್ನು ನೀರಿನಲ್ಲಿ ಬೆರೆಸಿ ಅಥವಾ ಲೋಶನ್ ಜೊತೆಗೆ ಮಿಕ್ಸ್ ಮಾಡಿ ಅದನ್ನು ಮೈಗೆ ಹಚ್ಚಿಕೊಳ್ಳಿ. ಈ ರೀತಿ ಮಾಡುವುದರಿಂದ ಸೊಳ್ಳೆಗಳು ನಿಮ್ಮ ಹತ್ತಿರಕ್ಕೂ ಸುಳಿಯುವುದಿಲ್ಲ.
ಸೋಯಾಬೀನ್ ಎಣ್ಣೆ : ಸೋಯಾಬೀನ್ ಎಣ್ಣೆ ಕೂಡ ಸೊಳ್ಳೆಗಳನ್ನು ಓಡಿಸಲು ಸಹಾಯ ಮಾಡುತ್ತದೆ. ರಾತ್ರಿ ಮಲಗುವ ಮುನ್ನ ಮೈಗೆಲ್ಲಾ ಸೋಯಾಬೀನ್ ಎಣ್ಣೆಯನ್ನು ಹಚ್ಚಿಕೊಳ್ಳಿ. ಸೊಳ್ಳೆಗಳು ನಿಮ್ಮ ಹತ್ತಿರಕ್ಕೂ ಸುಳಿಯುವುದಿಲ್ಲ.