ಯಾವಾಗಲೂ ಯಂಗ್ ಆಗಿ ಕಾಣಬೇಕು ಅನ್ನೋ ಆಸೆ ಎಲ್ಲರಿಗೂ ಇರುವುದು ಸಹಜ. ಹಾಗಾಗಿ ಮುಖದ ಚರ್ಮವನ್ನು ಬಿಗಿಯಾಗಿಸಲು ಮಹಿಳೆಯರು ಸಾಕಷ್ಟು ಕಸರತ್ತು ಮಾಡ್ತಾರೆ. ಸೂಕ್ಷ್ಮ ರೇಖೆಗಳು, ಸಡಿಲವಾದ ಚರ್ಮ ಮತ್ತು ಸುಕ್ಕುಗಳು ಇವೆಲ್ಲವೂ ವಯಸ್ಸಾದ ಚಿಹ್ನೆಗಳು. ಚರ್ಮಕ್ಕೆ ವಯಸ್ಸಾಗುವುದು ನೈಸರ್ಗಿಕ ಪ್ರಕ್ರಿಯೆ. ಕೆಲವೊಮ್ಮೆ ಅಕಾಲಿಕವಾಗಿ ಚರ್ಮ ಸುಕ್ಕುಗಟ್ಟುತ್ತದೆ.
ಇದರಿಂದ ವಯಸ್ಸಾದಂತೆ ಕಾಣಲಾರಂಭಿಸುತ್ತದೆ. ಇದು ಉತ್ತಮ ಆರೋಗ್ಯದ ಸಂಕೇತವಲ್ಲ. ಕೇವಲ 30 ವರ್ಷಕ್ಕೇ ನಿಮ್ಮ ಮುಖದಲ್ಲಿ ಸುಕ್ಕುಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿದರೆ ನೀವು ಕೆಲವೊಂದು ಟಿಪ್ಸ್ ಅನುಸರಿಸಬೇಕು.
ಮುಖ ಸುಕ್ಕುಗಟ್ಟಲು ಆರಂಭಿಸುತ್ತಿದ್ದಂತೆ ಮುಖದ ಅಂಗಾಂಶಗಳು ಮತ್ತು ಸ್ನಾಯುಗಳು ತಮ್ಮ ಟೋನ್ ಅನ್ನು ಕಳೆದುಕೊಳ್ಳುತ್ತವೆ ಮತ್ತು ಸಡಿಲಗೊಳ್ಳುತ್ತವೆ. ಕಾಲಜನ್ ಮಟ್ಟವನ್ನು ಕಾಪಾಡಿಕೊಳ್ಳಲು ಮತ್ತು ಸುಕ್ಕುಗಳನ್ನು ಕಡಿಮೆ ಮಾಡಲು ಪುಡಿ ಅಥವಾ ದ್ರವ ರೂಪದಲ್ಲಿ ಕಾಲಜನ್ ಪೂರಕಗಳು ಲಭ್ಯವಿದೆ. ಆದರೆ ಇದು ಶಾಶ್ವತ ಚಿಕಿತ್ಸೆ ಅಲ್ಲ.
ತಾತ್ಕಾಲಿಕ ಪರಿಹಾರ ಕಂಡುಕೊಳ್ಳುವ ಬದಲು ಸಾಕಷ್ಟು ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ಅದು ನಿಮ್ಮ ಚರ್ಮ ಆರೋಗ್ಯಕರವಾಗಿರಲು ಸಹಕರಿಸುತ್ತದೆ. ಆಲಿವ್ ಆಯಿಲ್ ನಿಮ್ಮ ತ್ವಚೆಗೆ ತುಂಬಾ ಪ್ರಯೋಜನಕಾರಿ. ಇದರಲ್ಲಿ ವಿಟಮಿನ್ ಎ ಮತ್ತು ಇ ನಂತಹ ಆ್ಯಂಟಿಒಕ್ಸಿಡೆಂಟ್ಗಳಿವೆ. ಆಲಿವ್ ಆಯಿಲ್ನಿಂದ ನಿಯಮಿತವಾಗಿ ನಿಮ್ಮ ಮುಖಕ್ಕೆ ಮಸಾಜ್ ಮಾಡಿ. ಇದರಿಂದ ನಿಮ್ಮ ತ್ವಚೆ ತೇವಾಂಶದಿಂದ ಕೂಡಿರುತ್ತದೆ ಮತ್ತು ಸುಕ್ಕುಗಳು ಬರುವುದಿಲ್ಲ.
ಬಾಳೆಹಣ್ಣು ನಿಮ್ಮ ಮುಖದ ಸುಕ್ಕುಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಏಕೆಂದರೆ ಬಾಳೆಹಣ್ಣಿನಲ್ಲಿ ವಿಟಮಿನ್ಗಳು ಮತ್ತು ಆಂಟಿಒಕ್ಸಿಡೆಂಟ್ಗಳು ಸಮೃದ್ಧವಾಗಿವೆ. ಇದು ಸುಕ್ಕುಗಳು ಮತ್ತು ಚರ್ಮದ ರೇಖೆಗಳನ್ನು ಕಡಿಮೆ ಮಾಡುತ್ತದೆ. ವಾರಕ್ಕೆ ಎರಡು ಬಾರಿ ಬಾಳೆಹಣ್ಣಿನ ತಿರುಳನ್ನು ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿಕೊಂಡು 20 ನಿಮಿಷಗಳ ಕಾಲ ಹಾಗೇ ಬಿಡಿ. ನಂತರ ಅದನ್ನು ತೊಳೆಯಿರಿ.
ವಿಟಮಿನ್ ಇ ಮಾತ್ರೆಗಳನ್ನು ಕೂಡ ಸುಕ್ಕು ನಿವಾರಣೆಗೆ ಬಳಸಬಹುದು. ಈ ಕ್ಯಾಪ್ಸುಲ್ ಅನ್ನು ಒಂದು ಚಮಚ ಅಲೋವೆರಾ ಜೆಲ್ನಲ್ಲಿ ಮಿಶ್ರಣ ಮಾಡಿ. ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ. ಅರ್ಧ ಗಂಟೆಯ ನಂತರ ಮುಖ ತೊಳೆಯಿರಿ. ಹೀಗೆ ಮಾಡುವುದರಿಂದ ಮುಖದ ಮೇಲಿನ ಸುಕ್ಕುಗಳು ಮಾಯವಾಗುತ್ತವೆ.