ಅಜೀರ್ಣ, ಮಲಬದ್ಧತೆ, ಗ್ಯಾಸ್ ಹೀಗೆ ಒಂದಲ್ಲ ಒಂದು ಸಮಸ್ಯೆ ಈಗಿನ ಕಾಲದಲ್ಲಿ ಪ್ರತಿಯೊಬ್ಬರನ್ನು ಕಾಡ್ತಾ ಇದೆ. ಇದಕ್ಕೆ ಮುಖ್ಯ ಕಾರಣ ಆಹಾರ ಕ್ರಮ.
ಸಮಯವಲ್ಲದ ಸಮಯದಲ್ಲಿ ಆಹಾರ ಸೇವನೆ, ಫಾಸ್ಟ್ ಫುಡ್ ಇದಕ್ಕೆ ಮೂಲ. ಅಜೀರ್ಣ, ಮಲಬದ್ಧತೆ ಸಮಸ್ಯೆ ಇರುವವರು ಅದು ಇದು ಅಂತಾ ಮಾತ್ರೆ ತೆಗೆದುಕೊಳ್ತಾರೆ. ಆದ್ರೆ ಯಾವುದರಿಂದಲೂ ರೋಗ ಮಾತ್ರ ಗುಣವಾಗುವುದಿಲ್ಲ. ಹೊಟ್ಟೆ ಸಮಸ್ಯೆ ಮನಸ್ಸಿಗೂ ಕಿರಿಕಿರಿಯನ್ನುಂಟು ಮಾಡುತ್ತದೆ.
ಅಜೀರ್ಣ ಸಮಸ್ಯೆಗೆ ನಮ್ಮ ಮನೆಯಲ್ಲಿಯೇ ಮದ್ದಿದೆ. ದಿನ ಬಳಕೆ ಪದಾರ್ಥಗಳನ್ನು ನಾವು ಸರಿಯಾಗಿ ಬಳಸಿಕೊಂಡು ಈ ಸಮಸ್ಯೆಯಿಂದ ಮುಕ್ತಿ ಹೊಂದಬಹುದು.
ಎಲ್ಲರ ಮನೆಯಲ್ಲೂ ಸಾಮಾನ್ಯವಾಗಿ ಇರುವಂತಹ ಶುಂಠಿ. ನಮ್ಮ ಆಹಾರದಲ್ಲಿ ಇದನ್ನು ಬಳಕೆ ಮಾಡುವುದು ಬಹಳ ಮುಖ್ಯ. ಬೆಳಿಗ್ಗೆ, ಮಧ್ಯಾಹ್ನ ಹಾಗೂ ಸಂಜೆ ಆಹಾರ ಸೇವನೆಗಿಂತ ಮೊದಲು ಸಣ್ಣ ಹಸಿ ಶುಂಠಿ ಚೂರನ್ನು ಜಗಿದು ರಸ ನುಂಗುತ್ತ ಬಂದರೆ ಅಜೀರ್ಣ ಸಮಸ್ಯೆ ಇರುವುದಿಲ್ಲ.
ಹಿಂದಿನಿಂದಲೂ ಬಳಕೆಗೆ ಬಂದಿರುವ ಜೀರಿಗೆ ಅಜೀರ್ಣ ಸಮಸ್ಯೆ ಹೋಗಲಾಡಿಸಲು ರಾಮಬಾಣ. ಆಹಾರದಲ್ಲಿ ಜೀರಿಗೆಯ ಉಪಯೋಗವನ್ನು ಜಾಸ್ತಿ ಮಾಡಬೇಕು. ಜೊತೆಗೆ ಊಟದ ನಂತರ ಸ್ವಲ್ಪ ಜೀರಿಗೆಯನ್ನು ಜಗಿಯುವುದರಿಂದ ತಿಂದ ಆಹಾರ ಸರಿಯಾಗಿ ಜೀರ್ಣವಾಗಿ ಮಲಬದ್ಧತೆ ಸಮಸ್ಯೆ ಹೋಗುವುದರ ಜೊತೆಗೆ ಹಸಿವಾಗುತ್ತದೆ.
ಊಟದ ನಂತರ ಸೋಂಪನ್ನು ಸೇವಿಸುವುದು ಬಹಳ ಒಳ್ಳೆಯದು. ಇದು ತಿಂದ ಆಹಾರ ಜೀರ್ಣವಾಗಲು ಸಹಾಯ ಮಾಡುತ್ತದೆ.
ನಿಂಬೆಹಣ್ಣಿನ ರಸ ಕೂಡ ಜೀರ್ಣಕ್ರಿಯೆಗೆ ಬಹಳ ಉಪಯುಕ್ತ. ಅಡುಗೆ ಸೋಡಾ, ಉಪ್ಪು, ನಿಂಬೆ ರಸವನ್ನು ಸೇರಿಸಿ ಕುಡಿಯುವುದರಿಂದ ಅಜೀರ್ಣ ಸಮಸ್ಯೆಯನ್ನು ಹೋಗಲಾಡಿಸಬಹುದು.
ಕೊತ್ತಂಬರಿ ಬೀಜದಲ್ಲಿ ಕೂಡ ಔಷಧಿಯ ಗುಣವಿದೆ. ಹೊಟ್ಟೆ ಉಬ್ಬಿದ ಅನುಭವವಾಗ್ತಾ ಇದ್ದಲ್ಲಿ ಮಜ್ಜಿಗೆಗೆ ಕೊತ್ತಂಬರಿ ಬೀಜದ ಪುಡಿಯನ್ನು ಹಾಕಿ ಕುಡಿಯುವುದರಿಂದ ಆರಾಮ ಸಿಗುತ್ತದೆ.