ಈ ಋತುವಿನಲ್ಲಿ ಸಣ್ಣದೊಂದು ಉದಾಸೀನ ರೋಗಕ್ಕೆ ಆಹ್ವಾನ ನೀಡಬಹುದು. ಚಳಿಗಾಲದಲ್ಲಿ ಅನೇಕರು ಶೀತದ ಸಮಸ್ಯೆಯಿಂದ ಬಳಲುತ್ತಾರೆ. ಸಾಮಾನ್ಯ ರೋಗ ನೆಗಡಿ ಎಂದು ನಿರ್ಲಕ್ಷ್ಯಿಸಿದರೆ ಮುಂದೆ ಸಮಸ್ಯೆ ದೊಡ್ಡದಾಗಬಹುದು.
ಮಾರುಕಟ್ಟೆಯಲ್ಲಿ ನೆಗಡಿ ನಿಯಂತ್ರಣಕ್ಕೆ ಅನೇಕ ಔಷಧಿಗಳು ಬಂದಿವೆ. ಅವು ಅಡ್ಡ ಪರಿಣಾಮ ಬೀರುವ ಸಾಧ್ಯತೆ ಜಾಸ್ತಿ ಇದೆ. ಅದರ ಬದಲು ಮನೆಯಲ್ಲಿಯೇ ಕೆಲವೊಂದು ಉಪಚಾರ ಮಾಡಿಕೊಂಡರೆ ಶೀತ ಮಾಯವಾಗುತ್ತದೆ.
ಶೀತದ ಕಾರಣ ನಿಮ್ಮ ತಲೆ ಭಾರ ಎನಿಸಿದರೆ ಓಂ ಕಾಳುಗಳನ್ನು ಬಿಸಿ ಮಾಡಿ. ನಂತರ ಅದನ್ನು ಕೈನಲ್ಲಿ ಇಟ್ಟುಕೊಂಡು, ರಬ್ ಮಾಡಿ ವಾಸನೆಯನ್ನು ಪದೇ ಪದೇ ತೆಗೆದುಕೊಳ್ಳಿ.
ಶೀತದ ಕಾರಣ ನಿಮಗೆ ಜ್ವರ ಬರುವ ಲಕ್ಷಣ ಕಂಡು ಬಂದಲ್ಲಿ ಓಂ ಕಾಳು ಬೀಜವನ್ನು ಎರಡು ಕಪ್ ನೀರಿನೊಂದಿಗೆ ಕುದಿಸಿ. ಅದು ಒಂದು ಕಪ್ ಆಗುವವರೆಗೆ ಕುದಿಸಿ. ನಂತರ ಅದಕ್ಕೆ ಸ್ವಲ್ಪ ಬೆಲ್ಲ ಸೇರಿಸಿ ಆಗಾಗ ಸೇವಿಸುತ್ತಿರಿ.
ತುಳಸಿ ಹಾಗೂ ಬೋಳಕಾಳನ್ನು ಸೇರಿಸಿ ಕಷಾಯ ಮಾಡಿಕೊಂಡು ಆಗಾಗ ಕುಡಿಯುತ್ತಿರಿ. ಇದರಿಂದ ನೆಗಡಿ ಕಡಿಮೆಯಾಗುವುದಲ್ಲದೇ, ಸೋಂಕು ಕೂಡ ದೂರವಾಗುತ್ತದೆ.
ದಾಲ್ಚಿನಿ ಮತ್ತು ಜಾಯಿಕಾಯಿ ಪುಡಿಯೊಂದಿಗೆ ಜೇನುತುಪ್ಪ ಬೆರೆಸಿ, ಸಂಜೆ, ಬೆಳಿಗ್ಗೆ ಕುಡಿಯುತ್ತ ಬಂದರೆ ಪ್ರಯೋಜನಕಾರಿ.
ಒಂದು ಚಮಚ ಜೇನು ತುಪ್ಪಕ್ಕೆ, ಅರ್ಧ ಚಮಚ ಈರುಳ್ಳಿ ರಸವನ್ನು ಬೆರೆಸಿ ಕುಡಿಯುವುದರಿಂದ ಶೀತ ಮಾಯವಾಗುತ್ತದೆ.