ಕೇರಳದ ನಾನ್ ವೆಜ್ ಅಡುಗೆಗಳು ಸಾಕಷ್ಟು ಜನಪ್ರಿಯವಾಗಿದ್ದು, ಅದರ ರುಚಿ ತಿಂದವರಷ್ಟೇ ಬಲ್ಲರು. ನೀವೂ ನಾನ್ ವೆಜ್ ಪ್ರಿಯರಾಗಿದ್ದು ನಿಮಗೂ ಕೇರಳ ಶೈಲಿಯ ಮಟನ್ ಫ್ರೈ ಮಾಡಿ ಸವಿಯಬೇಕು ಎನಿಸಿದರೆ ಸರಳವಾಗಿ ಮನೆಯಲ್ಲಿಯೇ ತಯಾರಿಸಿ. ಮಟನ್ ಫ್ರೈ ಮಾಡುವ ವಿವರಣೆ ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು
ಮಟನ್ – 1/2 ಕೆ.ಜಿ.
ಜೀರಿಗೆ ಪುಡಿ – 2 ಟೇಬಲ್ ಸ್ಪೂನ್
ಕೆಂಪು ಮೆಣಸಿನ ಕಾಯಿ – 5 ರಿಂದ 6 (ಚಿಕ್ಕದಾಗಿ ಕತ್ತರಿಸಿರುವುದು)
ಬೆಳ್ಳುಳ್ಳಿ – 6 ರಿಂದ 7 ತುಂಡುಗಳು
ಕರಿ ಬೇವು
ಕರಿಯಲು ತೆಂಗಿನ ಎಣ್ಣೆ
ಉಪ್ಪು
ಮಾಡುವ ವಿಧಾನ
ಜೀರಿಗೆ ಪುಡಿ, ಕೆಂಪು ಮೆಣಸಿನ ಕಾಯಿ, ಬೆಳ್ಳುಳ್ಳಿ, ಉಪ್ಪು ಮತ್ತು ಕರಿ ಬೇವುಗಳನ್ನು ಸ್ವಲ್ಪ ನೀರಿನ ಜೊತೆಗೆ ಚೆನ್ನಾಗಿ ರುಬ್ಬಿಕೊಳ್ಳಬೇಕು. ಕಲ್ಲಿನಲ್ಲಿ ಅರೆದರೆ ಇನ್ನೂ ಉತ್ತಮ.
ನಂತರ ಅದನ್ನು ಪೇಸ್ಟ್ ರೀತಿ ತಯಾರಿಸಿಕೊಳ್ಳಬೇಕು. ಈ ಪೇಸ್ಟ್‌ನಲ್ಲಿ ಮಟನ್ ಮಾಂಸವನ್ನು ಚೆನ್ನಾಗಿ ಕಲೆಸಿ. ತದನಂತರ ಒಂದು ಗಂಟೆಯವರೆಗೆ ಇದನ್ನು ನೆನೆಯಲು ಬಿಡಿ.
ಈ ಮಸಾಲೆಯು ಚೆನ್ನಾಗಿ ಮಟನ್ ಗೆ ಹಿಡಿದಿದೆ ಎಂದು ಅನಿಸಿದ ಮೇಲೆ ಅದನ್ನು ತೆಂಗಿನ ಎಣ್ಣೆಯಲ್ಲಿ ಕರಿಬೇವಿನ ಎಲೆಗಳ ಜೊತೆ ಹಾಕಿ ಹೊಂಬಣ್ಣಕ್ಕೆ ಬರುವವರೆಗೆ ಫ್ರೈ ಮಾಡಿ. ಈಗ ರುಚಿ ರುಚಿಯಾದ ಕೇರಳ ಮಟನ್ ಫ್ರೈ ತಿನ್ನಲು ರೆಡಿ.