ಬಿಪಿಎಲ್ ಕಾರ್ಡ್ ಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಒಂದನ್ನು ಕೈಗೊಂಡಿದ್ದು, ಸ್ವಂತ ಕಾರು ಇದ್ದವರಿಗೆ ಬಿಪಿಎಲ್ ಕಾರ್ಡ್ ರದ್ದು ಮಾಡುವುದಾಗಿ ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಶುಕ್ರವಾರದಂದು ಘೋಷಣೆ ಮಾಡಿದ್ದಾರೆ.
ಆದರೆ ಜೀವನಾಧಾರಕ್ಕಾಗಿ ವಾಣಿಜ್ಯ ಬಳಕೆಗೆ ತೆಗೆದುಕೊಳ್ಳುವ ತ್ರಿಚಕ್ರ ವಾಹನ ಅಥವಾ ಕಾರು (ಯಲ್ಲೋ ಬೋರ್ಡ್) ಹೊಂದಿದ್ದವರ ಬಿಪಿಎಲ್ ಕಾರ್ಡ್ ರದ್ದುಪಡಿಸಲಾಗುವುದಿಲ್ಲ ಎಂದು ಸ್ಪಷ್ಟನೆ ನೀಡಲಾಗಿದ್ದು, ಯಲ್ಲೋ ಬೋರ್ಡ್ ವಾಹನವಿದ್ದ ಕಾರಣಕ್ಕೆ ರದ್ದಾಗಿರುವ ಬಿಪಿಎಲ್ ಕಾರ್ಡುಗಳನ್ನು ಮರು ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿದುಬಂದಿದೆ.
ಯಲ್ಲೋ ಬೋರ್ಡ್ ವಾಹನವಿದ್ದ ಕಾರಣಕ್ಕೆ ರದ್ದಾಗಿರುವ ಬಿಪಿಎಲ್ ಕಾರ್ಡುಗಳನ್ನು ಮರುವಿತರಣೆಗೆ ಸೂಚಿಸಿ 2022ರ ಆಗಸ್ಟ್ 24ರಂದೇ ಸರ್ಕಾರ ಸುತ್ತೋಲೆ ಹೊರಡಿಸಿದ್ದು, ಈ ಆದೇಶ ಪಾಲನೆಯಾಗದಿರುವುದರ ಕುರಿತಂತೆ ಪತ್ರಕರ್ತರು ಸಚಿವ ಮುನಿಯಪ್ಪನವರ ಗಮನ ಸೆಳೆದ ವೇಳೆ, ಇದನ್ನು ಪರಿಶೀಲಿಸಿ ನಿಯಮಾನುಸಾರ ಕಾರ್ಡ್ ವಿತರಣೆಗೆ ಸೂಚಿಸಲಾಗುವುದು ಎಂದು ತಿಳಿಸಿದ್ದಾರೆ.