ಮಕ್ಕಳು ಹಠ ಮಾಡುವುದು, ಕೋಪ ಮಾಡಿಕೊಳ್ಳುವುದು, ಅಳು ಇವೆಲ್ಲ ಸಹಜ. ಆದರೆ ಅತಿಯಾದ ಹಠಮಾರಿತನ ಅಪಾಯಕ್ಕೆ ನಾಂದಿಯಾಗಬಹುದು. ಕೆಲವೊಮ್ಮೆ ಪೋಷಕರ ಸಣ್ಣಪುಟ್ಟ ತಪ್ಪುಗಳಿಂದಲೂ ಮಗು ಈ ರೀತಿ ಕೋಪಿಷ್ಠನಾಗುವ ಸಾಧ್ಯತೆಗಳಿರುತ್ತವೆ.
ಮಕ್ಕಳು ಎಲ್ಲವನ್ನೂ ಬಹುಬೇಗ ಕಲಿಯುತ್ತಾರೆ, ಅವರ ವೀಕ್ಷಣಾ ಶಕ್ತಿಯೂ ತುಂಬಾ ಹೆಚ್ಚಿರುತ್ತದೆ. ಹಾಗಾಗಿ ಪೋಷಕರು ಮಕ್ಕಳೊಂದಿಗೆ ಯಾವ ರೀತಿ ವರ್ತಿಸಬೇಕು ಎಂಬುದು ಬಹಳ ಮುಖ್ಯ. ಹಠಮಾರಿ ಮಗುವಿನ ಮನವೊಲಿಸಲು ಹೆತ್ತವರಿಗೆ ಕೆಲವೊಂದು ಸಲಹೆಗಳು ಇಲ್ಲಿವೆ.
ಮಕ್ಕಳ ಮನಸ್ಸಿನಲ್ಲಿ ಹಲವಾರು ಪ್ರಶ್ನೆಗಳು ಮತ್ತು ಕುತೂಹಲಗಳು ತುಂಬಿರುತ್ತವೆ. ಹಾಗಾಗಿ ಅವರ ಕೆಲಸದ ಮೇಲೆ ಹೆಚ್ಚಿನ ನಿರ್ಬಂಧಗಳನ್ನು ಹೇರುವುದು ಮಕ್ಕಳಿಗೆ ಇಷ್ಟವಾಗುವುದಿಲ್ಲ. ಹಾಗಾಗಿ ಎಲ್ಲದಕ್ಕೂ ಅಡ್ಡಿಪಡಿಸಬೇಡಿ. ಈ ರೀತಿ ಮಾಡಿದರೆ ಅವರು ನಿಮ್ಮಿಂದ ದೂರವಾಗುತ್ತಾರೆ. ಅವರ ಕಲಿಕಾ ಸಾಮರ್ಥ್ಯ ಮತ್ತು ಅರ್ಥಮಾಡಿಕೊಳ್ಳುವ ಸಾಮರ್ಥ್ಯವೂ ಕಡಿಮೆಯಾಗುತ್ತದೆ.
ಮಗು ನಿಮ್ಮ ಮಾತನ್ನು ಕೇಳದಿದ್ದಾಗ ಕೆಟ್ಟ ಪದಗಳನ್ನು ಬಳಸಬೇಡಿ. ಈ ಕಾರಣದಿಂದಾಗಿ ಮಕ್ಕಳ ನಡವಳಿಕೆ ಕೂಡ ಅದೇ ರೀತಿ ಬದಲಾಗುತ್ತದೆ. ಹೆತ್ತವರ ಪ್ರತಿಯೊಂದು ಮಾತು ಮಕ್ಕಳ ಮನಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಕೋಪವನ್ನು ಯಾವಾಗಲೂ ನಿಯಂತ್ರಿಸಿಕೊಳ್ಳಿ, ಪದಗಳನ್ನು ಎಚ್ಚರಿಕೆಯಿಂದ ಆರಿಸಿ.
ಮಕ್ಕಳನ್ನು ಅತಿಯಾಗಿ ಬೈಯುವುದು ಮತ್ತು ಹೊಡೆಯುವುದರಿಂದ ಹೆತ್ತವರ ಬಗ್ಗೆ ಭಯವೇ ದೂರವಾಗಿಬಿಡುತ್ತದೆ. ಆದ್ದರಿಂದ ಇವನ್ನೆಲ್ಲ ಅತ್ಯಂತ ಅಪರೂಪದ ಪರಿಸ್ಥಿತಿಗಳಲ್ಲಿ ಬಳಸಿ. ಆಗ ಮಾತ್ರ ಮಗುವಿಗೆ ತಾನು ದೊಡ್ಡ ತಪ್ಪು ಮಾಡಿದ್ದೇನೆಂಬುದು ಅರ್ಥವಾಗುತ್ತದೆ. ಸಣ್ಣ ತಪ್ಪುಗಳನ್ನು ಮಾಡಿದಾಗ ಅದು ತಪ್ಪು ಎಂಬುದನ್ನು ಮನವರಿಕೆ ಮಾಡಿಕೊಡಿ.
ಮಗುವು ತನ್ನದೇ ಆದ ಕೆಲಸವನ್ನು ಮಾಡುತ್ತಿದ್ದರೆ, ಸರಿ ಮತ್ತು ತಪ್ಪುಗಳನ್ನು ಅರ್ಥಮಾಡಿಕೊಳ್ಳಲು ಜೀವನದ ಬಗ್ಗೆ ಭಾರೀ ಉಪನ್ಯಾಸಗಳನ್ನು ನೀಡಬೇಡಿ. ನೀವು ಹೇಳುವುದನ್ನು ಮಗು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಭವಿಷ್ಯದಲ್ಲಿ ನಿಮ್ಮ ಮಾತುಗಳನ್ನು ಮಗು ಗಂಭೀರವಾಗಿ ಪರಿಗಣಿಸುವುದಿಲ್ಲ. ಮಗುವಿಗೆ ಸುಲಭ ಮತ್ತು ಅರ್ಥವಾಗುವ ಭಾಷೆಯಲ್ಲಿ ಮಾತನಾಡಿ.
ಮಗುವನ್ನು ವಿಧೇಯನನ್ನಾಗಿ ಮಾಡಲು ಬಯಸಿದರೆ, ಇದಕ್ಕಾಗಿ ನೀವು ಅವನನ್ನು ಸರಿಯಾದ ದಿಕ್ಕಿನಲ್ಲಿ ಪ್ರೇರೇಪಿಸಬೇಕು. ಸಣ್ಣ ಸಣ್ಣ ಒಳ್ಳೆಯ ಅಭ್ಯಾಸಗಳು ಮತ್ತು ಸಾಧನೆಗಳಿಗಾಗಿ ಅವರನ್ನು ಪ್ರಶಂಸಿಸಿ. ಹೀಗೆ ಮಾಡುವುದರಿಂದ ಮಗು ನಿಮ್ಮ ಮಾತಿಗೆ ಬೆಲೆ ಕೊಡುತ್ತದೆ.