ಸಣ್ಣ ಮಕ್ಕಳಿಗೆ ಊಟ ಮಾಡಿಸುವುದು ಸವಾಲಿನ ಕೆಲಸಗಳಲ್ಲಿ ಒಂದು. ಮಗು ಓಡಿದಲ್ಲಿ ತಾನೂ ಓಡಿ, ನಿಂತು, ಕೂತು ಬಟ್ಟಲು ಖಾಲಿ ಮಾಡುವ ಹೊತ್ತಿಗೆ ಅಮ್ಮ ಸುಸ್ತಾಗಿರುತ್ತಾಳೆ. ಮಗು ಸುಲಭದಲ್ಲಿ ಊಟ ಮಾಡುವಂತೆ ಮಾಡುವ ಕೆಲವು ಟಿಪ್ಸ್ ಗಳು ಇಲ್ಲಿವೆ.
ಮಗುವಿಗೆ ಊಟದ ಮೇಲೆ ಇಷ್ಟವಾಗುವಂತೆ ರುಚಿಯಾದ ಅಡುಗೆ ತಯಾರಿಸಿ. ಸಿಹಿ ಇಷ್ಟವಾದರೆ ತುಸು ಜಾಸ್ತಿ ಬೆಲ್ಲ ಬಳಸಿ. ಪಲ್ಯದ ಖಾರಕ್ಕೆ ಮೆಣಸಿನ ಪುಡಿಯ ಬದಲು ಗರಂ ಮಸಾಲೆ ಪೌಡರ್ ಚಿಟಿಕೆ ಉದುರಿಸಿ. ಹೇಗಿದ್ದರೂ ಚಾಟ್ ಇಷ್ಟಪಡುವ ಮಕ್ಕಳು ಇದರ ಪರಿಮಳಕ್ಕೆ ಮನಸೋತು ತಿನ್ನಲು ಆರಂಭಿಸುತ್ತವೆ.
ಬಣ್ಣಗಳೆಂದರೆ ಮಕ್ಕಳಿಗೆ ಬಲು ಇಷ್ಟ. ಅದಕ್ಕಾಗಿ ಬಣ್ಣಬಣ್ಣದ ಅಂದರೆ ಕ್ಯಾರೆಟ್, ಬೀನ್ಸ್, ಬೀಟ್ ರೂಟ್ ಬಳಸಿ. ಬಣ್ಣಗಳ ಕತೆ ಹೆಣೆದು ಹೇಳಿ ಮಕ್ಕಳಿಗೆ ತಿನ್ನಿಸಿ.
ಹಲವು ಪೋಷಕರು ಮಗುವನ್ನು ಒಂದೆಡೆ ಕೂರಿಸಬೇಕೆಂದು ಮೊಬೈಲ್ ಇಲ್ಲವೇ ಟಿವಿ ಮುಂದೆ ಕೂರಿಸಿ ಊಟ ಮಾಡಿಸುತ್ತಾರೆ. ಇದರಿಂದ ಮಗುವಿನ ಗಮನವೆಲ್ಲಾ ಪರದೆಯತ್ತ ಇರುತ್ತದೆಯೇ ಹೊರತು ಜಗಿದು ತಿನ್ನುವತ್ತ ಗಮನ ಕೊಡುವುದೇ ಇಲ್ಲ. ಇದರಿಂದ ಮಗುವಿನ ಜೀರ್ಣಕ್ರಿಯೆ ಸಮಸ್ಯೆ ಉಂಟಾಗಬಹುದು. ಹಾಗಾಗಿ ಇದನ್ನು ತಪ್ಪಿಸಿ.
ಪಾಲಕ್ ದೋಸೆಯ ಬಣ್ಣಕ್ಕೆ, ಮಿನಿ ಇಡ್ಲಿಗೆ, ಪುಟಾಣಿ ಉದ್ದಿನ ದೋಸೆಗೆ ಮಕ್ಕಳು ಮರುಳಾಗುತ್ತಾರೆ. ಇಂಥ ತಿನಿಸುಗಳನ್ನೇ ಮಾಡಿ. ಇವುಗಳನ್ನು ಮಕ್ಕಳು ಇಷ್ಟ ಪಟ್ಟು ಸೇವಿಸುತ್ತಾರೆ.