ಹೋಳಿ ಬಣ್ಣಗಳ ಹಬ್ಬ. ಬಹಳ ಸಂತೋಷವಾಗಿ ಇದನ್ನು ಆಚರಿಸಲಾಗುತ್ತದೆ. ಆದರೆ ಹೋಳಿ ಆಡಿದ ಬಳಿಕ ಬಟ್ಟೆಗಳಿಗೆಲ್ಲ ಕಲೆ ಅಂಟಿಕೊಳ್ಳುವುದು ಸಾಮಾನ್ಯ. ಕೆಲವೊಮ್ಮೆ ಹೊಸದಾದ ಅಥವಾ ನೆಚ್ಚಿನ ಉಡುಪುಗಳಿಗೆಲ್ಲ ಹೋಳಿ ಬಣ್ಣಗಳಿಂದ ಕಲೆಯಾಗಿಬಿಡುತ್ತದೆ.
ಈ ಕಲೆಗಳನ್ನು ಹೋಗಲಾಡಿಸುವುದು ಕಷ್ಟ ಎನ್ನುವುದರಲ್ಲಿ ಸಂದೇಹವಿಲ್ಲ. ಅನೇಕರು ಇದನ್ನು ಸ್ವಚ್ಛಮಾಡಲು ಅಸಾಧ್ಯ ಎಂದುಕೊಂಡು ಬಿಸಾಡಿಬಿಡುತ್ತಾರೆ. ಆದರೆ ಹೋಳಿ ಬಣ್ಣ ಹೋಗಲಾಡಿಸಲು ಕೆಲವು ಸುಲಭದ ಸಲಹೆಗಳಿವೆ. ಬಟ್ಟೆಗಳಿಂದ ಈ ಬಣ್ಣಗಳನ್ನು ತೆಗೆಯಬಹುದು. ಆದರೆ ಕಲೆಯಾದ ತಕ್ಷಣ ಅದನ್ನು ಸ್ವಚ್ಛಗೊಳಿಸಲು ಪ್ರಾರಂಭಿಸಬೇಕು.
ಬಟ್ಟೆಯ ಮೇಲೆ ಒಣಗಿದ ಬಣ್ಣವಿದ್ದರೆ ಅದನ್ನು ನೀರಿನಿಂದ ಸ್ವಚ್ಛಗೊಳಿಸುವ ಮೊದಲು ಚೆನ್ನಾಗಿ ಕೊಡವಿಕೊಳ್ಳಿ. ನಂತರ ಬಟ್ಟೆಯನ್ನು ತೇವಗೊಳಿಸಿ. ಬಣ್ಣವು ತೇವವಾಗಿದ್ದರೆ ಸಾಧ್ಯವಾದಷ್ಟು ಬೇಗ ಅದರ ಮೇಲೆ ಟಿಶ್ಯೂ ಪೇಪರ್ ಇರಿಸಿ. ಹೀಗೆ ಮಾಡುವುದರಿಂದ ಬಣ್ಣವು ಹರಡುವುದಿಲ್ಲ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಹೀರಿಕೊಳ್ಳುತ್ತದೆ.
ಒಂದು ಬಕೆಟ್ ತಣ್ಣೀರಿನಲ್ಲಿ ಸ್ವಲ್ಪ ಸೌಮ್ಯವಾದ ಡಿಟರ್ಜೆಂಟ್ ಪುಡಿಯನ್ನು ಮಿಶ್ರಣ ಮಾಡಿ. ಬಣ್ಣದ ಬಟ್ಟೆಯನ್ನು ಈ ದ್ರಾವಣದಲ್ಲಿ 30 ನಿಮಿಷಗಳ ಕಾಲ ನೆನೆಸಿಡಿ. ನಂತರ ಅದನ್ನು ಕೈಯಿಂದ ಉಜ್ಜಿಕೊಳ್ಳಿ ಅಥವಾ ವಾಷಿಂಗ್ ಮಷಿನ್‌ಗೂ ಹಾಕಬಹುದು.
ಬಟ್ಟೆಯಲ್ಲಿನ ಕಲೆಗಳನ್ನು ತೆಗೆದುಹಾಕಲು ನೀರು ಮತ್ತು ಅಡುಗೆ ಸೋಡಾವನ್ನು ಪೇಸ್ಟ್ ಮಾಡಿ, ಅದನ್ನು ಅನ್ವಯಿಸಿ. 15 ನಿಮಿಷಗಳ ನಂತರ ಮೃದುವಾದ ಬ್ರಷ್‌ನಿಂದ ಪೇಸ್ಟ್ ಅನ್ನು ಉಜ್ಜಿ ಬಟ್ಟೆಯನ್ನು ತೊಳೆಯಿರಿ. ಅಡುಗೆ ಸೋಡಾ ಮತ್ತು ವಿನೆಗರ್‌ನ ಮಿಶ್ರಣವನ್ನು ಸಹ ಬಳಸಬಹುದು.
ನಿಂಬೆ ರಸವು ನೈಸರ್ಗಿಕ ಬ್ಲೀಚಿಂಗ್ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಹತ್ತಿಯ ಸಹಾಯದಿಂದ ಕಲೆಯ ಮೇಲೆ ನಿಂಬೆ ರಸವನ್ನು ಅನ್ವಯಿಸಿ ನಂತರ ಅದನ್ನು ತೊಳೆಯಿರಿ. ಗಾಢ ಬಣ್ಣದ ಬಟ್ಟೆಗಳ ಮೇಲೆ ಈ ವಿಧಾನವನ್ನು ಬಳಸಬೇಡಿ. ಏಕೆಂದರೆ ಇದರಿಂದ ಬಟ್ಟೆಯ ಬಣ್ಣ ಮಸುಕಾಗಬಹುದು.