ಮಕ್ಕಳ ಕೋಪ ಸಹಜ. ಆದರೆ ಚಿಕ್ಕ ಪುಟ್ಟ ವಿಷಯಗಳಿಗೆಲ್ಲ ವಿಪರೀತ ಕೋಪ ಮಾಡಿಕೊಳ್ಳುವ ಮಕ್ಕಳನ್ನು ನಿಭಾಯಿಸುವುದು ಸವಾಲಿನ ಕೆಲಸ. ಆಲೋಚನೆಗಳು, ಭಾವನೆಗಳು ಮತ್ತು ಆಸೆಗಳ ಘರ್ಷಣೆಯೇ ಈ ರೀತಿಯ ಕೋಪಕ್ಕೆ ಕಾರಣವಾಗುತ್ತದೆ. ಮಕ್ಕಳ ಕೋಪ ಪೋಷಕರಲ್ಲಿ ಒತ್ತಡ ಉಂಟುಮಾಡುತ್ತದೆ.
ಪೋಷಕರು ಮತ್ತು ಮಗುವಿನ ನಡುವಿನ ಸಂವಹನವನ್ನು ತಡೆಯುತ್ತದೆ. ಕೇವಲ ಚಿಕ್ಕ ಮಕ್ಕಳು ಮಾತ್ರವಲ್ಲ ಹರೆಯಕ್ಕೆ ಬಂದ ಮಕ್ಕಳು ಮತ್ತು ಪೋಷಕರ ಮಧ್ಯೆ ಕೂಡ ವಾದ-ವಿವಾದ, ಜಗಳಗಳು ನಡೆಯುತ್ತವೆ. ಹದಿಹರೆಯದಲ್ಲಿ ಇಂತಹ ಸಂಘರ್ಷಗಳು ಸಾಮಾನ್ಯ. ಇಂತಹ ಸ್ಥಿತಿ ಉದ್ಭವವಾಗದಂತೆ ಆರಂಭದಲ್ಲೇ ಎಚ್ಚರಿಕೆ ವಹಿಸಬೇಕು.
ಮಗುವಿನ ತಿಳುವಳಿಕೆಯನ್ನು ಉತ್ತೇಜಿಸುವ ಮತ್ತು ಸಕಾರಾತ್ಮಕ ಸಂಬಂಧವನ್ನು ಕಾಪಾಡಿಕೊಳ್ಳುವ ಪರಿಣಾಮಕಾರಿ ತಂತ್ರಗಳನ್ನು ಅಳವಡಿಸಿಕೊಂಡರೆ ಇಂತಹ ಸಂಘರ್ಷಗಳನ್ನು ತಡೆಯಬಹುದು. ನಿಮ್ಮ ಮಗುವೂ ಸಹ ಪ್ರತಿ ವಿಷಯಕ್ಕೆ ಕೋಪಗೊಳ್ಳುತ್ತಿದ್ದರೆ ಗಾಬರಿಯಾಗಬೇಡಿ. ಅದನ್ನು ನಿಯಂತ್ರಿಸಲು ಕೆಲವು ಸಲಹೆಗಳಿವೆ.
ಮಗುವಿನ ಕೋಪದ ಕಾರಣವನ್ನು ಅರ್ಥಮಾಡಿಕೊಳ್ಳಿ
ಮೊದಲನೆಯದಾಗಿ ಮಗು ಏಕೆ ಕೋಪಗೊಳ್ಳುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಮಗು ಏನಾದರೂ ಚಿಂತೆ ಮಾಡುತ್ತಿದೆಯೇ? ಅದಕ್ಕೇನಾದರೂ ಭಯವಿದೆಯೇ? ಅಥವಾ ಏನಾದರೂ ಅಗತ್ಯವಿದೆಯೇ ಎಂಬುದನ್ನು ತಿಳಿದುಕೊಳ್ಳಬೇಕು.
ಕೋಪವನ್ನು ಹೇಗೆ ನಿಯಂತ್ರಿಸಬೇಕೆಂದು ಮಗುವಿಗೆ ಕಲಿಸಿ
ಕೋಪವನ್ನು ಹೇಗೆ ನಿಯಂತ್ರಿಸಬೇಕೆಂದು ಮಕ್ಕಳಿಗೆ ಕಲಿಸುವುದು ಮುಖ್ಯ. ಕೋಪವು ಸಾಮಾನ್ಯ ಭಾವನೆ ಎಂದು ಅವರಿಗೆ ತಿಳಿಹೇಳಬೇಕು. ಆದರೆ ಸಿಟ್ಟನ್ನು ಸರಿಯಾದ ರೀತಿಯಲ್ಲಿ ವ್ಯಕ್ತಪಡಿಸಲು ಕಲಿಯಬೇಕು. ಸ್ವಲ್ಪ ದೈಹಿಕ ವ್ಯಾಯಾಮ ಮಾಡುವುದು, ಆಳವಾದ ಉಸಿರನ್ನು ತೆಗೆದುಕೊಳ್ಳುವುದು ಅಥವಾ ವಯಸ್ಕರೊಂದಿಗೆ ಮಾತನಾಡುವುದು ಹೇಗೆ ಎಂದು ಅವರಿಗೆ ಕಲಿಸಿ.
ಮಗುವಿಗೆ ಪ್ರೀತಿ ಮತ್ತು ಬೆಂಬಲ ನೀಡಿ
ತಂದೆ-ತಾಯಿಯಾಗಿ ನೀವು ಮಗುವಿನ ಭಾವನೆಗಳನ್ನು ಅರ್ಥಮಾಡಿಕೊಂಡಿದ್ದೀರಿ ಮತ್ತು ಅವನನ್ನು ಅಥವಾ ಅವಳನ್ನು ಪ್ರೀತಿಸುತ್ತೀರಿ ಎಂದು ಮಗುವಿಗೆ ತಿಳಿಸಿ. ಅಷ್ಟೇ ಅಲ್ಲ ಯಾವಾಗಲೂ ನಿನ್ನ ಸಹಾಯಕ್ಕೆ ಸಿದ್ಧ ಎಂಬುದನ್ನು ಮನವರಿಕೆ ಮಾಡಿಕೊಡಿ. ತಾನು ಒಬ್ಬಂಟಿಯಲ್ಲ ಎಂಬ ಭಾವನೆ ಮಗುವಿಗೆ ಬರಬೇಕು.
ಮಗುವಿನ ಕೋಪದಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ
ಮಗುವಿನ ಕೋಪದಿಂದ ನಿಮ್ಮನ್ನು ರಕ್ಷಿಸಿಕೊಳ್ಳುವುದು ಸಹ ಮುಖ್ಯವಾಗಿದೆ. ಮಗು ಹಿಂಸಾತ್ಮಕವಾಗಿದ್ದರೆ ಶಾಂತಗೊಳ್ಳಲು ಸಮಯ ಬೇಕಾಗುತ್ತದೆ. ಮಗುವಿನ ಕೋಪ ಶಮನವಾಗುವವರೆಗೆ ನಿಮ್ಮನ್ನು ರಕ್ಷಿಸಿಕೊಳ್ಳಲು ಈ ರೀತಿ ಮಾಡಿ,
– ಮಗುವನ್ನು ಪ್ರತ್ಯೇಕ ಕೋಣೆಗೆ ಕಳುಹಿಸಿ.
– ಮಗುವಿನಿಂದ ಸ್ವಲ್ಪ ಅಂತರವನ್ನು ಕಾಯ್ದುಕೊಳ್ಳಿ.
– ಮಗುವನ್ನು ನೇರವಾಗಿ ಕಣ್ಣುಗಳಲ್ಲಿ ನೋಡಬೇಡಿ.
ತಜ್ಞರ ಸಹಾಯವನ್ನು ತೆಗೆದುಕೊಳ್ಳಿ
ಮಗುವಿಗೆ ಕೋಪ ತಣ್ಣಗಾಗಿಸಲು ಸಾಧ್ಯವೇ ಆಗುತ್ತಿಲ್ಲ ಎನಿಸಿದಾಗ ವೃತ್ತಿಪರರ ಸಹಾಯವನ್ನು ಪಡೆಯಿರಿ. ಮಗುವಿನ ಕೋಪಕ್ಕೆ ಕಾರಣಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಸರಿಪಡಿಸಲು ಸಲಹೆಗಾರರು ಅಥವಾ ಚಿಕಿತ್ಸಕರು ನೆರವಾಗುತ್ತಾರೆ.