ದೇಹದ ಮೇಲಿನ ಬೇಡವಾದ ಕೂದಲನ್ನ ತೆಗೆದು ಹಾಕಿ ಸುಕೋಮಲವಾಗಿ ಕಾಣುವುದು ಇಂದಿನ ಮಾಡರ್ನ್ ಹೆಂಗಳೆಯರ ಟ್ರೆಂಡ್. ಬಾಡಿ ಹೇರ್ ರಿಮೂವ್ ಮಾಡಿಕೊಳ್ಳುವುದು ಕೂಡ ಒಂದು ಡೀಸೆನ್ಸಿ ಅಂತಾನೇ ಪರಿಗಣಿಸಲ್ಪಡುತ್ತಿದೆ.
ಆದರೆ ಮತ್ತೆ ಮತ್ತೆ ಬೆಳೆಯುವ ದೇಹದ ಮೇಲಿನ ಕೂದಲನ್ನ ವಿವಿಧ ರೀತಿಯಲ್ಲಿ ತೆಗೆಯಲಾಗುತ್ತದಾದರೂ, ಅತ್ಯಂತ ಬ್ಯುಸಿ ಲೈಫ್ ಸ್ಟೈಲ್ ನಲ್ಲಿರುವ ಹೆಂಗಳೆಯರಿಗೆ ಶೇವಿಂಗ್ ಮಾಡಿಕೊಳ್ಳುವುದು ಅತ್ಯಂತ ಸುಲಭದ ಮಾರ್ಗ. ಶೇವ್ ಮಾಡಿಕೊಳ್ಳುವ ಅಭ್ಯಾಸವಿರುವ ಲಲನೆಯರು ಅನುಸರಿಸಬೇಕಾದ ಕೆಲವು ಮುಖ್ಯ ಸಲಹೆಗಳನ್ನ ನಾವು ನಿಮಗೆ ಕೊಟ್ಟಿದ್ದೇವೆ ನೋಡಿ….
ಸ್ನಾನ ಮಾಡುವಾಗ ಅಥವಾ ಸ್ನಾನದ ನಂತರ ಶೇವ್ ಮಾಡಿಕೊಳ್ಳಿ
ಸ್ನಾನ ಮಾಡುವಾಗ ಅಥವಾ ಸ್ನಾನದ ನಂತರ ಶೇವ್ ಮಾಡಿಕೊಂಡರೆ ಶೇವಿಂಗ್ ಅತ್ಯಂತ ಸುಲಭ. ಏಕೆಂದರೆ ನೀರಿನ ಸಾಮೀಪ್ಯದಿಂದ ಚರ್ಮ ಮೃದುವಾಗಿರುವ ಕಾರಣ, ಶೇವಿಂಗ್ ಗೆ ಚರ್ಮ ಸ್ಪಂದಿಸುತ್ತದೆ. ಹೀಗಾಗಿ ಕೂದಲನ್ನ ತೆಗೆಯುವುದೂ ಸುಲಭ, ಮೃದು ಚರ್ಮದ ಮೇಲಿನ ಕೂದಲು ಸಂಪೂರ್ಣ ಶೇವ್ ಆಗುವ ಕಾರಣ ಅದರ ಬೆಳವಣಿಗೆ ಕೂಡ ನಿಧಾನವಾಗಬಲ್ಲದು
ಸ್ವಲ್ಪ ಕಾಲಾವಕಾಶವನ್ನಿಟ್ಟುಕೊಂಡು ತಾಳ್ಮೆಯಿಂದ ಶೇವ್ ಮಾಡಿಕೊಳ್ಳಿ
ಶೇವ್ ಮಾಡಿಕೊಳ್ಳುವಾಗ ಯಾವುದೇ ಒತ್ತಡಕ್ಕೆ ಒಳಗಾಗಿರಬಾರದು. ಒತ್ತಡಕ್ಕೊಳಗಾದ ಮನಸ್ಸಿನಲ್ಲಿ ಅಥವಾ ಗಡಿಬಿಡಿಯಲ್ಲಿ ಶೇವ್ ಮಾಡಿಕೊಳ್ಳುವುದರಿಂದ ಚರ್ಮ ಕತ್ತರಿಸುವ ಸಾಧ್ಯತೆಯೇ ಜಾಸ್ತಿ. ಹೀಗಾಗಿ ನಿಮಗಾಗಿ ಸ್ವಲ್ಪ ಕಾಲಾವಕಾಶ ಮಾಡಿಕೊಂಡು ಶೇವ್ ಮಾಡಿಕೊಳ್ಳಿ.
ರೇಸರ್ ಆಯ್ಕೆ ಕೂಡ ಅಷ್ಟೇ ಮುಖ್ಯ
ಶೇವ್ ಮಾಡಿಕೊಳ್ಳಲು ಯಾವ್ಯಾವುದೋ ರೇಸರ್ ಉಪಯೋಗ ಸಲ್ಲದು. ಹೆಂಗಳೆಯರಿಗಾಗಿಯೇ ವಿಶೇಷವಾಗಿ ಸಿದ್ಧಪಡಿಸಲಾದ ರೇಸರ್ ನ್ನೇ ಕೊಂಡುಕೊಂಡು ಶೇವ್ ಮಾಡಿಕೊಳ್ಳುವುದು ಉತ್ತಮ. ದುಬಾರಿ ಎಂದೆನಿಸಿದರೂ ಚರ್ಮದ ಆರೋಗ್ಯದ ದೃಷ್ಟಿಯಿಂದ ಒಳ್ಳೆಯ ಗುಣಮಟ್ಟದ ಲೇಡೀಸ್ ರೇಸರ್ ನ್ನೇ ಬಳಸಿ.
ಮೊದಲು ಕೆಳಮುಖವಾಗಿ ಶೇವ್ ಮಾಡಿ ನಂತರ ಮೇಲ್ಮುಖವಾಗಿ ಶೇವ್ ಮಾಡಿಕೊಳ್ಳಿ
ಶೇವ್ ಮಾಡುವ ವೇಳೆ ಒಮ್ಮೆಲೆ ಮೇಲ್ಮುಖವಾಗಿ ಶೇವ್ ಮಾಡಕೂಡದು. ಮೊದಲು ಕೆಳಮುಖವಾಗಿ ಶೇವ್ ಮಾಡಿಯೇ ನಂತರ ಮೇಲ್ಮುಖವಾಗಿ ಶೇವ್ ಮಾಡಿಕೊಳ್ಳಿ. ಇದರಿಂದ ಚರ್ಮ ಕತ್ತರಿಸುವುದನ್ನ ತಪ್ಪಿಸಬಹುದು.
ಸ್ವಲ್ಪ ಸ್ವಲ್ಪ ಭಾಗವನ್ನೇ ಶೇವ್ ಮಾಡುತ್ತಾ ಸಾಗಿ
ವ್ಯಾಕ್ಸ್ ಮಾಡಿದ ರೀತಿಯಲ್ಲಿ ಶೇವ್ ಮಾಡಲು ಸಾಧ್ಯವಿಲ್ಲ. ಒಮ್ಮೆಲೆ ದೊಡ್ಡ ಪ್ರದೇಶದಲ್ಲಿ ಶೇವ್ ಮಾಡಿಕೊಂಡರೆ ಅಲ್ಲಲ್ಲಿ ಕೂದಲು ಉಳಿಯುವ ಸಾಧ್ಯತೆಯೂ ಜಾಸ್ತಿ. ಅಲ್ಲದೆ, ಅಚ್ಚುಕಟ್ಟಾಗಿ ಶೇವ್ ಮಾಡುವುದಕ್ಕೂ ಸಾಧ್ಯವಿಲ್ಲ. ಹೀಗಾಗಿ ಸ್ವಲ್ಪ ಸ್ವಲ್ಪ ಭಾಗವನ್ನೇ ಶೇವ್ ಮಾಡುತ್ತಾ ನಿಧಾನಕ್ಕೆ ದೇಹದ ಕೂದಲನ್ನ ತೆಗೆಯಿರಿ.
ಹತ್ತಿರದಿಂದ ಶೇವ್ ಮಾಡಿಕೊಳ್ಳಿ
ಕೈಕಾಲುಗಳಿಗೆ ಶೇವ್ ಮಾಡುವಾಗ ಬಾತ್ ಟಬ್‌ನಲ್ಲಿ ಮುಳುಗಿಕೊಂಡೇ ಶೇವ್ ಮಾಡಿಕೊಳ್ಳುವುದು ಉತ್ತಮ. ಬಾತ್ ಟಬ್ ವ್ಯವಸ್ಥೆಯಿಲ್ಲದ ಮಂದಿ ಬಾತ್ ರೂಮ್ ನಲ್ಲಿ ಕುಳಿತು ನಿಧಾನಕ್ಕೆ ಹತ್ತಿರದಿಂದ ಶೇವ್ ಮಾಡಿಕೊಳ್ಳಿ. ಹತ್ತಿರದಿಂದ ಶೇವ್ ಮಾಡಿಕೊಳ್ಳುವುದರಿಂದ ಚರ್ಮಕ್ಕೂ ಒಳ್ಳೆಯದು ಮತ್ತು ಗಾಯಗಳಾಗುವುದನ್ನೂ ತಪ್ಪಿಸಬಹುದು.