ನಮ್ಮ ವ್ಯಕ್ತಿತ್ವ ಮಾತ್ರ ಚೆನ್ನಾಗಿದ್ದರೆ ಸಾಲದು, ನಮ್ಮ ಲುಕ್ ಸಹ ಚೆನ್ನಾಗಿರಬೇಕು. ಹಾಗಾಗಿ ದೇಹದ ಅಂಗಾಂಗಗಳ ಶುಚಿತ್ವದ ಜೊತೆಗೆ ಸೌಂದರ್ಯದ ಬಗ್ಗೆಯೂ ಗಮನಹರಿಸುವುದು ಬಹಳ ಮುಖ್ಯ. ಕೆಲವೊಮ್ಮೆ ಕಪ್ಪನೆಯ ತುಟಿಗಳೇ ನಮ್ಮ ಅಂದಕ್ಕೆ ಕುತ್ತು ತರುತ್ತವೆ.
ಸಿಗರೇಟ್ ಸೇದುವವರ ತುಟಿಗಳು ಕಪ್ಪಾಗುವುದು ಸಹಜ. ಆದ್ರೆ ಧೂಮಪಾನದ ಅಭ್ಯಾಸವಿಲ್ಲದವರ ತುಟಿಗಳೂ ಕಪ್ಪು ಬಣ್ಣದಲ್ಲಿ ಇರುವುದುಂಟು. ಕೆಲವೊಂದು ಸುಲಭದ ಮನೆಮದ್ದುಗಳನ್ನು ಮಾಡಿದ್ರೆ ತುಟಿಗಳ ಕಪ್ಪು ಬಣ್ಣವನ್ನ ಹೋಗಲಾಡಿಸಬಹುದು. ನೀವು ಕೂಡ ಸುಂದರ ಗುಲಾಬಿ ತುಟಿಗಳನ್ನು ಪಡೆಯಬಹುದು.
ಬೀಟ್‌ರೂಟ್ ಜ್ಯೂಸ್: ಬೀಟ್ರೂಟ್ ಜ್ಯೂಸ್ ಸೇವನೆಯು ದೇಹಕ್ಕೆ ಅತ್ಯಂತ ಪ್ರಯೋಜನಕಾರಿ. ಕೆಲವರು ಬೀಟ್‌ರೂಟ್ ಅನ್ನು ಸಲಾಡ್ ರೂಪದಲ್ಲೂ ಸೇವಿಸ್ತಾರೆ. ಬೀಟ್ರೂಟ್ ಗುಲಾಬಿ ಮತ್ತು ಕೆಂಪು ಬಣ್ಣದಲ್ಲಿರುತ್ತದೆ. ಹಾಗಾಗಿಯೇ ಇದು ನಮ್ಮ ನೈಸರ್ಗಿಕ ಸೌಂದರ್ಯವನ್ನು ಹೆಚ್ಚಿಸುತ್ತವೆ. ಬೀಟ್‌ರೂಟ್ ರಸಕ್ಕೆ ಸ್ವಲ್ಪ ಜೇನುತುಪ್ಪ ಬೆರೆಸಿ ತುಟಿಗಳಿಗೆ ಹಚ್ಚಿಕೊಳ್ಳಿ. ಹೀಗೆ ಮಾಡುವುದರಿಂದ ತುಟಿಗಳು ಗುಲಾಬಿ ಬಣ್ಣಕ್ಕೆ ತಿರುಗುತ್ತವೆ.
ಸಕ್ಕರೆ ಮತ್ತು ನಿಂಬೆ ರಸ: ಸಕ್ಕರೆ ಮತ್ತು ನಿಂಬೆ ರಸದ ಮಿಶ್ರಣ ಕೂಡ ಪರಿಣಾಮಕಾರಿ. ನಿಂಬೆಯು ಬ್ಲೀಚಿಂಗ್ ಗುಣಲಕ್ಷಣಗಳನ್ನು ಹೊಂದಿದೆ, ಇದನ್ನು ಚರ್ಮದ ಸತ್ತ ಜೀವಕೋಶಗಳನ್ನು ಸಕ್ರಿಯಗೊಳಿಸಲು ಬಳಸಲಾಗುತ್ತದೆ. ಮುಖಕ್ಕೆ ನಿಂಬೆ ರಸ ಹಚ್ಚುವುದನ್ನು ನೀವು ಅನೇಕ ಬಾರಿ ನೋಡಿರಬೇಕು. ಇದನ್ನು ನಿಮ್ಮ ತುಟಿಗಳಿಗೂ ಬಳಸಬಹುದು. ನಿಂಬೆಹಣ್ಣಿನ ಅರ್ಧ ಹೋಳು ತೆಗೆದುಕೊಂಡು ಅದಕ್ಕೆ ಸ್ವಲ್ಪ ಸಕ್ಕರೆ ಹಾಕಿ. ಅದನ್ನು ಸ್ಕ್ರಬ್‌ನಂತೆ ತುಟಿಗಳ ಮೇಲೆ ಉಜ್ಜಿಕೊಳ್ಳಿ. ಕೆಲವೇ ವಾರಗಳಲ್ಲಿ ತುಟಿಗಳ ಬಣ್ಣವು ಬದಲಾಗಲು ಪ್ರಾರಂಭಿಸುತ್ತದೆ.
ಅಲೋವೆರಾ ಜೆಲ್ ಮತ್ತು ಎಸ್ಸೆನ್ಷಿಯಲ್ ಆಯಿಲ್: ಅಲೋವೆರಾ ಜ್ಯೂಸ್ ಅನ್ನು ಮಧುಮೇಹ ಮತ್ತು ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ರಾಮಬಾಣವೆಂದು ಪರಿಗಣಿಸಲಾಗಿದೆ. ಇದು ಕೂದಲು ಮತ್ತು ಮುಖದ ಆರೋಗ್ಯಕ್ಕೂ ಹೇಳಿ ಮಾಡಿಸಿದಂತಿದೆ. ಮುಖದಲ್ಲಿ ನೈಸರ್ಗಿಕವಾಗಿ ಹೊಳಪನ್ನು ತರಲು ಸಹಾಯ ಮಾಡುತ್ತದೆ. ಅಲೋವೆರಾ ಜೆಲ್ ಹಾಗೂ ಎಸ್ಸೆನ್ಷಿಯಲ್ ಆಯಿಲ್ ಬಳಸಿ ಮನೆಯಲ್ಲೇ ಲಿಪ್ ಕೇರ್ ಬಾಮ್ ತಯಾರಿಸಿಕೊಳ್ಳಿ. ಅದನ್ನು ಪ್ರತಿದಿನ ತುಟಿಗಳಿಗೆ ಹಚ್ಚಿ. ಅದು ಒಣಗಿದ ನಂತರ ತಣ್ಣೀರಿನಿಂದ ತೊಳೆಯಿರಿ.