ಕೆಲವರಿಗೆ ಡ್ರೈ ಸ್ಕಿನ್ ಇದ್ದರೆ, ಇನ್ನು ಕೆಲವರದ್ದು ಕಾಂಬಿನೇಷನ್ ಹಾಗೇ ಕೆಲವರದ್ದು ಎಣ್ಣೆ ತ್ವಚೆ ಇರುತ್ತದೆ. ಈ ಎಣ್ಣೆ ಚರ್ಮದವರು ಹೆಚ್ಚು ಸಮಸ್ಯೆ ಎದುರಿಸುತ್ತಾರೆ.
ಮೊಡವೆ, ಕಲೆ, ಬ್ಲ್ಯಾಕ್ ಹೆಡ್ಸ್ ಇವೆಲ್ಲವೂ ಎಣ್ಣೆ ಚರ್ಮದವರಿಗೆ ಹೆಚ್ಚಾಗಿ ಕಾಡುತ್ತದೆ. ಸರಳವಾಗಿಯೇ ಮನೆಯಲ್ಲಿನ ವಸ್ತುಗಳಿಂದ ನಿಮ್ಮ ತ್ವಚೆಯನ್ನು ನಳನಳಿಸುವಂತೆ ಮಾಡಿ.
ಓಟ್ ಮಿಲ್: ಓಟ್ ಮಿಲ್ ಪ್ಯಾಕ್ ನಮ್ಮ ಮುಖದಲ್ಲಿರುವ ಹೆಚ್ಚಾದ ಎಣ್ಣೆಯ ಅಂಶವನ್ನು ತೆಗೆಯುವುದಕ್ಕೆ ಸಹಾಯ ಮಾಡುತ್ತದೆ. ಹಾಗೇ ಇದು ಡೆಡ್ ಸ್ಕಿನ್ ಅನ್ನು ನಿವಾರಿಸುತ್ತದೆ. 2 ದೊಡ್ಡ ಚಮಚ ಓಟ್ ಮಿಲ್ ತೆಗೆದುಕೊಳ್ಳಿ. ಅದಕ್ಕೆ 1 ಟೇಬಲ್ ಚಮಚ ಜೇನುತುಪ್ಪ ಹಾಕಿ. ನಂತರ ಅರ್ಧ ಬಾಳೆಹಣನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ನಂತರ ಇದನ್ನು ಮುಖಕ್ಕೆ ಹಚ್ಚಿಕೊಂಡು 5 ನಿಮಿಷದವರೆಗೆ ನಿಧಾನಕ್ಕೆ ಮಸಾಜ್ ಮಾಡಿ. ಆಮೇಲೆ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.
ಜೇನುತುಪ್ಪ: ಜೇನುತುಪ್ಪ ಕೂಡ ನಮ್ಮ ಮುಖದಲ್ಲಿನ ಮೊಡವೆ, ನೆರಿಗೆ ಹಾಗೂ ಎಣ್ಣೆಯ ಅಂಶವನ್ನು ಕಡಿಮೆ ಮಾಡುವಲ್ಲಿ ಸಹಾಯಕಾರಿಯಾಗಿದೆ. ಸ್ವಚ್ಛಗೊಳಿಸಿದ ಮುಖಕ್ಕೆ ತೆಳುವಾಗಿ ಒಂದು ಚಮಚ ಜೇನುತುಪ್ಪವನ್ನು ಹಚ್ಚಿಕೊಳ್ಳಿ. 10 ನಿಮಿಷ ಬಿಟ್ಟು ಮುಖ ತೊಳೆಯಿರಿ. ಇದರಿಂದ ಮುಖದ ಅಂದ ಹೆಚ್ಚುತ್ತದೆ. ಮೊಡವೆಯಿಂದ ಮುಕ್ತಿ ಪಡೆಯಲು ಸಹಾಯ ಮಾಡುತ್ತದೆ.
ಕಿತ್ತಳೆ ಹಣ್ಣಿನ ಸಿಪ್ಪೆ: 1 ಚಮಚ ಕಿತ್ತಳೆ ಹಣ್ಣಿನ ಸಿಪ್ಪೆ ಪೇಸ್ಟ್ ಗೆ 1 ಚಮಚ ಕಡಲೆಹಿಟ್ಟು, 1 ಚಮಚ ರೋಸ್ ವಾಟರ್ ಸೇರಿಸಿ ಮಿಶ್ರಣ ಮಾಡಿಕೊಂಡು ಇದನ್ನು ಪ್ಯಾಕ್ ರೀತಿ ಹಚ್ಚಿಕೊಂಡು ಹತ್ತು ನಿಮಿಷ ಬಿಟ್ಟು ಮುಖ ತೊಳೆಯಿರಿ. ಇದು ಎಣ್ಣೆ ತ್ವಚೆ ನಿವಾರಿಸುತ್ತದೆ.