ಗರ್ಭಾವಸ್ಥೆಯಲ್ಲಿ ಮಹಿಳೆಯರ ದೇಹದಲ್ಲಿ ಅನೇಕ ಬದಲಾವಣೆಗಳು ಸಂಭವಿಸುತ್ತವೆ. ಕೆಲವು ಮಹಿಳೆಯರಿಗೆ ಗರ್ಭಾವಸ್ಥೆಯಲ್ಲಿ ಹೆಚ್ಚು ಸಿಹಿ ಪದಾರ್ಥಗಳನ್ನು ತಿನ್ನಬೇಕೆಂಬ ಬಯಕೆಯಾಗುತ್ತದೆ. ಆದರೆ ವೈದ್ಯರ ಪ್ರಕಾರ ಗರ್ಭಿಣಿಯರು ಹೆಚ್ಚು ಸಿಹಿ ತಿನ್ನುವುದರಿಂದ ಮಧುಮೇಹದ ಅಪಾಯ ಹೆಚ್ಚಾಗುತ್ತದೆ.
ಗರ್ಭಿಣಿ ಹೆಚ್ಚು ಸಿಹಿತಿಂಡಿಗಳನ್ನು ಸೇವಿಸಿದರೆ ಮಗುವಿಗೆ ಸಕ್ಕರೆ ಕಾಯಿಲೆ ಬರುವ ಅಪಾಯವಿರುತ್ತದೆ. ಹಾಗಾಗಿ ಗರ್ಭಾವಸ್ಥೆಯಲ್ಲಿ ಡಯಟ್ ಬಗ್ಗೆ ವಿಶೇಷ ಗಮನಹರಿಸಬೇಕು. ಜೊತೆಗೆ ಪೌಷ್ಟಿಕ ಆಹಾರ ಸೇವನೆಗೆ ಹೆಚ್ಚಿನ ಗಮನ ನೀಡಬೇಕು. ಗರ್ಭಾವಸ್ಥೆಯಲ್ಲಿ ಸಕ್ಕರೆ ಅಥವಾ ಸಿಹಿ ತಿನ್ನಬೇಕೆಂಬ ಕಡುಬಯಕೆಗಳನ್ನು ಕಡಿಮೆ ಮಾಡಲು ಕೆಲವೊಂದು ಸುಲಭ ವಿಧಾನಗಳನ್ನು ಅನುಸರಿಸಬಹುದು.
ಗರ್ಭಾವಸ್ಥೆಯಲ್ಲಿ ಹಾರ್ಮೋನುಗಳ ಬದಲಾವಣೆಯಿಂದಾಗಿ ಮಹಿಳೆಯರು ಅನೇಕ ರೀತಿಯ ವಸ್ತುಗಳನ್ನು ತಿನ್ನಲು ಬಯಸುತ್ತಾರೆ. ಕೆಲವು ಮಹಿಳೆಯರಿಗೆ ಈ ಸಮಯದಲ್ಲಿ ಹುಳಿ ತಿನ್ನಬೇಕೆಂದು ಆಸೆಯಾಗುತ್ತದೆ. ಇನ್ನು ಕೆಲವರು ಸಿಹಿತಿಂಡಿಗಳು ಅಥವಾ ಐಸ್ ಕ್ರೀಮ್ ತಿನ್ನಲು ಬಯಸುತ್ತಾರೆ. ಇದು ಸಾಮಾನ್ಯ ಪ್ರಕ್ರಿಯೆ. ಸಕ್ಕರೆಯ ಕಡುಬಯಕೆಗಳನ್ನು ತಪ್ಪಿಸಲು ಆರೋಗ್ಯಕರ ತಿನಿಸುಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಸಿಹಿ ತಿನ್ನುವ ಆಸೆಯಾದರೆ ಎಳನೀರು ಕುಡಿಯಬಹುದು.
ಜೀವಸತ್ವಗಳು ಮತ್ತು ಖನಿಜಗಳಲ್ಲಿ ಸಮೃದ್ಧವಾಗಿರುವ ತಿನಿಸುಗಳನ್ನು ಸೇವಿಸಿ. ತಾಜಾ ಸಿಹಿ ಹಣ್ಣುಗಳು ಅಥವಾ ಡ್ರೈ ಫ್ರೂಟ್‌ಗಳನ್ನು ನೀಡಬಹುದು. ಈ ಪದಾರ್ಥಗಳನ್ನು ಸೇವಿಸುವುದರಿಂದ ಗರ್ಭಿಣಿಯರಿಗೆ ಯಾವುದೇ ರೀತಿಯ ಸಮಸ್ಯೆಯಾಗುವುದಿಲ್ಲ. ಮಗುವಿಗೆ ಪೌಷ್ಟಿಕಾಂಶ ಸಹ ಸಿಗುತ್ತದೆ.
ಗರ್ಭಾವಸ್ಥೆಯಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಆಹಾರವನ್ನು ಬದಲಾಯಿಸಬೇಕು. ಬೆಳಗಿನ ಉಪಾಹಾರವನ್ನು ತ್ಯಜಿಸಬಾರದು. ಬೆಳಗ್ಗೆ ಸಮತೋಲಿತ ಆಹಾರವನ್ನು ತೆಗೆದುಕೊಳ್ಳಿ. ಆಗ ದಿನವಿಡೀ ಹೆಚ್ಚುವರಿ ತಿನ್ನುವ ಬಯಕೆ ಆಗುವುದಿಲ್ಲ. ಅವರ ಹಸಿವು ಸಹ ನಿಯಂತ್ರಿಸಲ್ಪಡುತ್ತದೆ.
ನಿರ್ಜಲೀಕರಣದ ಕಾರಣದಿಂದಾಗಿ ಕೆಲವು ಮಹಿಳೆಯರು ಸಕ್ಕರೆ ಅಥವಾ ಸಿಹಿತಿಂಡಿಗಳಿಗಾಗಿ ಹಂಬಲಿಸುತ್ತಾರೆ. ಈ ಸಮಯದಲ್ಲಿ ಆಮ್ನಿಯೋಟಿಕ್ ದ್ರವವನ್ನು ಕಾಪಾಡಿಕೊಳ್ಳಲು ಸಾಕಷ್ಟು ದ್ರವ ಪದಾರ್ಥಗಳನ್ನು ಸೇವಿಸಬೇಕು. ನೀರನ್ನು ಚೆನ್ನಾಗಿ ಕುಡಿಯಬೇಕು. ಇದು ಸಕ್ಕರೆ ತಿನ್ನುವ ಬಯಕೆಯನ್ನು ಕಡಿಮೆ ಮಾಡುತ್ತದೆ.
ಗರ್ಭಾವಸ್ಥೆಯಲ್ಲಿ ಹಾರ್ಮೋನುಗಳ ಬದಲಾವಣೆಯನ್ನು ಕಡಿಮೆ ಮಾಡಲು ನಿಮ್ಮ ದಿನಚರಿಯಲ್ಲಿ ವ್ಯಾಯಾಮವನ್ನು ಸೇರಿಸಿ. ಈ ಅವಧಿಯಲ್ಲಿ ಯೋಗ ಮತ್ತು ವ್ಯಾಯಾಮದಿಂದ ಹಾರ್ಮೋನ್ ಮಟ್ಟವು ಸಾಮಾನ್ಯವಾಗಿರುತ್ತದೆ. ಇದರಿಂದ ಜಂಕ್ ಫುಡ್ ಅಥವಾ ಸಿಹಿ ತಿನ್ನಲು ಗರ್ಭಿಣಿಯರು ಬಯಸುವುದಿಲ್ಲ.