ಬೇಸಿಗೆಯಲ್ಲಿ ಸುಂದರ ತ್ವಚೆಯನ್ನು ಸಂರಕ್ಷಿಸುವುದು ಹೇಗೆ ಎಂಬ ಚಿಂತೆ ಬಹುತೇಕ ಎಲ್ಲರನ್ನೂ ಕಾಡುತ್ತದೆ. ಅದರಲ್ಲಿಯೂ ಬಿರು ಬಿಸಿಲಿಗೆ ಚರ್ಮ ಕಪ್ಪಾಗುವುದನ್ನು ತಪ್ಪಿಸಲು ನಾನಾ ಬಗೆಯ ಪ್ರಯೋಗವನ್ನು ಮಾಡುತ್ತಾರೆ. ಹೀಗಾಗಿ ಸುಡುವ ಬಿಸಿಲಿನಲ್ಲಿಯೂ ಚರ್ಮದ ಕಾಂತಿ ಕಾಪಾಡಿಕೊಳ್ಳುವ ಟಿಪ್ಸ್ ಇಲ್ಲಿದೆ.
ಯಾವಾಗಲೂ ಎಲ್ಲಾ ಸಮಯದಲ್ಲಿಯೂ ತ್ವಚೆಯ ಬಗೆಗೆ ಹೆಚ್ಚಿನ ಲಕ್ಷ್ಯ ವಹಿಸಬೇಕು. ಅದರಲ್ಲಿಯೂ ಬಿಸಿಲಿನಲ್ಲಿ ಸೂರ್ಯನಿಗೆ ಮೈಯೊಡ್ಡಿ ಬಂದ ಮೇಲೆ ತಣ್ಣನೆಯ ನೀರಿನಲ್ಲಿ ಸ್ನಾನ ಮಾಡಿದಲ್ಲಿ, ತ್ವಚೆಯ ತಾಪಮಾನ ಕುಗ್ಗುವುದರಿಂದ ತ್ವಚೆ ಕಪ್ಪಾಗುವುದನ್ನು ತಪ್ಪಿಸಬಹುದಾಗಿದೆ.
ಇನ್ನು ಹೆಚ್ಚಾಗಿ ಬಿಸಿಲಿನ ಸಂಪರ್ಕದಲ್ಲಿ ಇರುವವರು ಲೂಫಾ ಅಥವಾ ಬಾಡಿ ಸ್ಕ್ರಬರ್ ಬಳಸಿ ತ್ವಚೆಯ ಸತ್ತ ಜೀವಕೋಶಗಳನ್ನು ತೊಳೆದು ಹಾಕಿ ಮಾಯಿಶ್ಚರೈಸರ್ ನ ತೆಳು ಲೇಪನ ಮಾಡಬೇಕು. ಇದರಿಂದ ಸ್ವಲ್ಪ ಮಟ್ಟಿಗೆ ಚರ್ಮ ಕಪ್ಪಾಗುವುದನ್ನು ತಪ್ಪಿಸಬಹುದಾಗಿದೆ.
ಅಲ್ಲದೇ ಸೂರ್ಯನ ನೇರ ಕಿರಣಗಳಿಂದ ರಕ್ಷಿಸಿಕೊಳ್ಳುವುದರಿಂದ ತ್ವಚೆಗೆ ಹೆಚ್ಚಿನ ರಕ್ಷಣೆ ದೊರಕುತ್ತದೆ. ಸೂರ್ಯನ ಬೆಳಕಿಗೆ ಹೋಗುವ ಹದಿನೈದು ನಿಮಿಷಗಳ ಮುನ್ನ ಸನ್ ಸ್ಕ್ರೀನ್ ಮುಲಾಮು ಹಚ್ಚಿಕೊಂಡರೆ ಇದು ಅತಿ ನೇರಳೆ ಕಿರಣಗಳಿಂದ ರಕ್ಷಿಸಲಿದೆ.
ಬಿಸಿಲಿನಿಂದ ರಕ್ಷಿಸುವ ತರಹೇವಾರಿ ಮುಲಾಮುಗಳು ಮಾರುಕಟ್ಟೆಯಲ್ಲಿ ಸಾಕಷ್ಟು ಲಭ್ಯವಿದ್ದು, ಟ್ಯಾನಿಂಗ್ ಮೂಸ್ ನಿಂದ ಹಿಡಿದು ಸ್ಪ್ರೇ ಬಾಟಲಿಯವರೆಗೆ ಬಗೆ ಬಗೆಯ ಸೌಂದರ್ಯವರ್ಧಕಗಳು ಇವೆ. ಆದರೆ ಅದನ್ನು ಬಳಸುವ ಮುಂಚೆ ವೈದ್ಯರ ಸಲಹೆ ಪಡೆಯುವುದು ಅತ್ಯಂತ ಸೂಕ್ತ. ಇನ್ನು ವಿಶೇಷವಾಗಿ ಬೇಸಿಗೆಯಲ್ಲಿ ವಿಟಮಿನ್ ಗಳನ್ನು ಹೊಂದಿರುವ ಹಣ್ಣು ಹಂಪಲುಗಳನ್ನು, ಹಣ್ಣಿನ ರಸವನ್ನು ಸೇವಿಸಿ ದೇಹವನ್ನು ತಂಪಾಗಿರಿಸುವ ಮೂಲಕವೂ ಚರ್ಮದ ಕಾಂತಿಯನ್ನು ಕಾಪಾಡಬಹುದಾಗಿದೆ.