ಮುದ್ದಾದ ಮಗುವೆಂದರೆ ಎಲ್ಲರಿಗೂ ಇಷ್ಟ. ಆದರೆ ಇದೇ ಮಕ್ಕಳು ನಿದ್ದೆ ಮಾಡುವುದಕ್ಕೆ ಹಟ ಹಿಡಿದಾಗ ಮಾತ್ರ ತಾಯಂದಿರು ಸೋತು ಸುಣ್ಣವಾಗುತ್ತಾರೆ. ಹೊಟ್ಟೆ ತುಂಬಾ ಎದೆಹಾಲು ಕುಡಿಸಿ ಮಲಗಿಸಿದ ಮಗು ಅರ್ಧ ಗಂಟೆಯೊಳಗೆ ಎದ್ದು ಬಿಟ್ಟರೆ ತಲೆ ಚಿಟ್ಟು ಹಿಡಿದಂತಾಗುತ್ತದೆ.
ಅದು ಅಲ್ಲದೇ ರಾತ್ರಿ ಕೂಡ ಮಕ್ಕಳು ನಿದ್ದೆಗೆ ಜಾರದೇ ರಚ್ಚೆ ಹಿಡಿದರಂತೂ ಕೇಳುವುದೇ ಬೇಡ ತಾಯಂದಿರ ಗೋಳು. ಚಿಕ್ಕ ಮಗುವನ್ನು ಮಲಗಿಸುವುದಕ್ಕೆ ಇಲ್ಲೊಂದಿಷ್ಟು ಟಿಪ್ಸ್ ಇದೆ ನೋಡಿ.
* ಆದಷ್ಟು ಮಕ್ಕಳನ್ನು ಮಲಗಿದ್ದಲ್ಲೇ ಆಡಿಸಿ. ಎತ್ತಿಕೊಳ್ಳುತ್ತಲೇ ಇರಬೇಡಿ. ಇದರಿಂದ ಅವರುಗಳಿಗೆ ನಿಮ್ಮ ದೇಹದ ಶಾಖ ಸಿಕ್ಕಿ ಅವರು ಕೆಳಗಡೆ ಮಲಗುವುದಕ್ಕೆ ಹಟ ಹಿಡಿಯುತ್ತಾರೆ.
* ಇನ್ನು ಹಗಲು ಹೊತ್ತು ಹೆಚ್ಚು ಮಲಗಿಸಬೇಡಿ. ಸಂಜೆ ಆದಷ್ಟು ಮಲಗಿಸದೇ ಇರುವುದೇ ಒಳ್ಳೆಯದು. ಇದರಿಂದ ರಾತ್ರಿ ಅವರು ಬೇಗ ನಿದ್ರೆಗೆ ಜಾರುತ್ತಾರೆ.
* ಬೆಳಿಗ್ಗೆ ಚೆನ್ನಾಗಿ ಎಣ್ಣೆ ಮಸಾಜ್ ಮಾಡಿ ಬಿಸಿ ನೀರಿನಿಂದ ಸ್ನಾನ ಮಾಡಿಸಿ. ಇದರಿಂದ ನಿದ್ರೆ ಬೇಗ ಆವರಿಸುತ್ತದೆ.
* ಯಾವುದಾದರೂ ಸುಮಧುರವಾದ ಮ್ಯೂಸಿಕ್ ಅನ್ನು ಹಾಕಿ. ಇದು ಕೂಡ ಮಕ್ಕಳು ನಿದ್ರೆಗೆ ಜಾರುವುದಕ್ಕೆ ಸಹಾಯ ಮಾಡುತ್ತದೆ.
* ಯಾವುದ್ಯಾವುದೋ ಸಮಯದಲ್ಲಿ ಮಲಗಿಸಬೇಡಿ. ಒಂದೇ ರೀತಿಯ ಸಮಯ ಪಾಲಿಸಿ. ಬೆಳಿಗ್ಗೆ 10 ಗಂಟೆಗೆ ಮಲಗಿಸುವುದಾದರೆ ಅದೇ ಸಮಯವನ್ನು ಎಲ್ಲಾ ದಿನ ಪಾಲಿಸುವುದಕ್ಕೆ ಪ್ರಯತ್ನಿಸಿ. ಇದು ಮಕ್ಕಳಿಗೆ ಅಭ್ಯಾಸವಾಗಿ ಅದೇ ಸಮಯಕ್ಕೆ ನಿದ್ದೆ ಮಾಡುತ್ತಾರೆ.
ಮಗುವಿನ ಕೋಣೆಯಲ್ಲಿ ಜೋರಾಗಿ ಮಾತನಾಡುವುದು ಮಾಡಬೇಡಿ. ಟಿವಿ, ಮೊಬೈಲ್ ಗಳನ್ನು ದೂರವಿಡಿ. ಮಗು ಮಲಗಿದಾಗ ತಾಯಂದಿರು ಮಲಗುವುದಕ್ಕೆ ಪ್ರಯತ್ನಿಸಿ ಇದರಿಂದ ವಿಶ್ರಾಂತಿ ಸಿಗುತ್ತದೆ.