ಒತ್ತಡ ಅನೇಕ ಕಾಯಿಲೆಗಳಿಗೆ ಕಾರಣವಾಗ್ತಿದೆ ಅನ್ನೋದು ಬಹುತೇಕರಿಗೆ ತಿಳಿದಿಲ್ಲ. ಮಾರಕ ರೋಗಗಳಿಂದ ದೂರವಿರಬೇಕೆಂದರೆ ಒತ್ತಡ ಕಡಿಮೆ ಮಾಡಿಕೊಂಡು ಸಂತೋಷವಾಗಿರಬೇಕು. ಬಿಡುವಿಲ್ಲದ ಜೀವನಶೈಲಿಯಿಂದಾಗಿ ಜನರು ತಮ್ಮ ಬಗ್ಗೆ ಕಾಳಜಿ ವಹಿಸುವುದಿಲ್ಲ. ಆರಾಮವಾಗಿ ಉಸಿರಾಡಲು ಕೂಡ ಸಮಯವಿಲ್ಲದಂತಹ ಪರಿಸ್ಥಿತಿ ಈಗ ನಿರ್ಮಾಣವಾಗಿದೆ. ಅಂತಹ ಪರಿಸ್ಥಿತಿಯಲ್ಲಿ ಉದ್ವೇಗ ಸಹಜ. ಇದೆಲ್ಲದರಿಂದ ದೂರ ಉಳಿದು, ನಮಗಾಗಿ ಸ್ವಲ್ಪ ಸಮಯ ಮಾಡಿಕೊಳ್ಳಬೇಕು. ನಕ್ಕು ಮನಸ್ಸನ್ನು ಹಗುರಾಗಿಸಿಕೊಳ್ಳಲು ಕಾರಣಗಳನ್ನು ಕಂಡುಕೊಳ್ಳಬೇಕು. ಸ್ನೇಹಿತರೊಂದಿಗೆ ಸುತ್ತಾಡಲು ಹೋಗಬೇಕು.
ಒತ್ತಡವನ್ನು ತೊಡೆದುಹಾಕಲು ಪ್ರತಿದಿನ 15 ನಿಮಿಷಗಳ ಕಾಲ ವಾಕಿಂಗ್ ಮಾಡಬೇಕು. ಇದು ನಮ್ಮ ಆರೋಗ್ಯವನ್ನು ಸುಧಾರಿಸುತ್ತದೆ, ನಡಿಗೆ ಕೂಡ ನಗುವಿಗೆ ಕಾರಣವಾಗುತ್ತದೆ. ತುಂಬಾ ದುಃಖವಾಗಿದ್ದರೆ ಅಂತಹ ಸಮಯದಲ್ಲಿ ಶಾಪಿಂಗ್‌ಗೆ ಹೋಗಬೇಕು. ವಸ್ತುಗಳನ್ನು ಕೊಂಡುಕೊಳ್ಳದೇ ಇದ್ದರು ಅವುಗಳನ್ನು ನೋಡುವುದರಿಂದ ಮನಸ್ಸಿಗೆ ಖುಷಿಯಾಗುತ್ತದೆ.
ಒತ್ತಡದಲ್ಲಿದ್ದಾಗ ನಿಮಗೆ ಇಷ್ಟವಾಗುವಂತಹ ಕೆಲಸಗಳನ್ನು ಮಾಡಬೇಕು. ನಿಮಗಿಷ್ಟವಾದ ಆಹಾರವನ್ನು ಸೇವಿಸಬೇಕು. ಅಷ್ಟೇ ಅಲ್ಲ ಫೇವರಿಟ್ ಹಾಡುಗಳನ್ನು ಕೇಳಿ. ಇದು ಮಾನಸಿಕ ಆರೋಗ್ಯಕ್ಕೆ ಪೂರಕವಾಗಿದೆ. ಇದರಿಂದ ಖಿನ್ನತೆಯ ಮನಸ್ಥಿತಿ ಕೂಡ ಸಾಕಷ್ಟು ಸುಧಾರಿಸುತ್ತದೆ.
ತುಂಬಾ ಕೋಪ ಬಂದಾಗ, ಕೆಲಸದ ಒತ್ತಡದಿಂದ ಉದ್ವೇಗ ಉಂಟಾಗುತ್ತದೆ. ಈ ರೀತಿಯ ಕೋಪ ಮತ್ತು ಉದ್ವೇಗ ನಮ್ಮ ಆರೋಗ್ಯಕ್ಕೆ ಹಾನಿಕರ. ಮನಸ್ಸನ್ನು ಶಾಂತವಾಗಿಡಲು ಪ್ರತಿದಿನ ಯೋಗ ಮತ್ತು ಧ್ಯಾನವನ್ನು ಮಾಡಿ.
ಸುಮ್ಮನೆ ಕುಳಿತು ಏನಾದರೊಂದು ಯೋಚನೆ ಮಾಡುತ್ತಿರಬೇಡಿ, ಅದರ ಬದಲು ಒಳ್ಳೆಯ ಪುಸ್ತಕಗಳನ್ನು ಓದಿ. ಪುಸ್ತಕ ಓದುವುದರಿಂದ ಜ್ಞಾನವೃದ್ಧಿಯಾಗುತ್ತದೆ, ಮನಸ್ಸಿಗೆ ಕೂಡ ಬೇಸರವಾಗುವುದಿಲ್ಲ. ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ, ನಾಳೆಗೆ ಬಿಡಬೇಡಿ. ಈ ರೀತಿ ಮಾಡುವುದರಿಂದ ಒತ್ತಡ ಕಡಿಮೆಯಾಗುತ್ತದೆ