ಮುಖದ ಸೌಂದರ್ಯವೊಂದೇ ಅಲ್ಲ ಚರ್ಮ, ಕೈ, ಕಾಲು, ಕೂದಲು ಹೀಗೆ ಪ್ರತಿಯೊಂದು ಅಂಗದ ಸೌಂದರ್ಯ ವೃದ್ಧಿಗೆ ಮಹಿಳೆಯರು ಮಹತ್ವ ನೀಡ್ತಾರೆ.
ಎಲ್ಲರ ಗಮನ ತಮ್ಮತ್ತ ಸೆಳೆಯಲು ಬ್ಯೂಟಿ ಪಾರ್ಲರ್ ಮೊರೆ ಹೋಗ್ತಾರೆ. ಆದ್ರೆ ಮನೆಯಲ್ಲಿಯೇ ಕೆಲವೊಂದು ಉಪಾಯಗಳನ್ನು ಅನುಸರಿಸಿ ಚರ್ಮ, ಕೂದಲು, ಕೈ, ಕಾಲಿನ ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು.
ವಾರದಲ್ಲಿ ಎರಡು ಬಾರಿ ತಲೆ ಕೂದಲಿಗೆ ಎಣ್ಣೆ ಮಸಾಜ್ ಮಾಡಿ. ಆಲಿವ್ ಆಯಿಲ್ ಸ್ವಲ್ಪ ಬಿಸಿ ಮಾಡಿ ಅದನ್ನು ಕೂದಲಿನ ಬುಡಕ್ಕೆ ಹಚ್ಚಿ ನಿಧಾನವಾಗಿ ಮಸಾಜ್ ಮಾಡಿ. ನಂತ್ರ ಬಿಸಿ ನೀರಿಗೆ ಟವೆಲ್ ಹಾಕಿ. ಅದನ್ನು ತಲೆ ಮೇಲೆ ಇಟ್ಟು ನಿಧಾನವಾಗಿ ಪ್ರೆಸ್ ಮಾಡಿ. ಇದ್ರಿಂದ ನೆತ್ತಿಯೊಳಗೆ ಎಣ್ಣೆ ಸುಲಭವಾಗಿ ಸೇರುತ್ತದೆ. ಈ ಪ್ರಕ್ರಿಯೆಯನ್ನು 3-4 ಬಾರಿ ಮಾಡಿ.
ಮೊಟ್ಟೆಯ ಬಿಳಿ ಭಾಗ ತೈಲಯುಕ್ತ ಕೂದಲನ್ನು ನೈಸರ್ಗಿಕವಾಗಿ ಸ್ವಚ್ಛಗೊಳಿಸುತ್ತದೆ. ಕೂದಲು ತೊಳೆಯುವ ಅರ್ಧ ಗಂಟೆ ಮೊದಲು ಕೂದಲಿಗೆ ಹಚ್ಚಿಕೊಳ್ಳಿ. ಕೂದಲು ಮೃದುವಾಗಿ ಹೊಳಪು ಪಡೆಯುತ್ತದೆ.
ನಿಮ್ಮ ಕೂದಲು ಶುಷ್ಕವಾಗಿದ್ದರೆ ಕೂದಲು ತೊಳೆಯುವ ಮೊದಲು ಕಂಡಿಷನರ್ ಮಾಡಿ. ಒಂದು ಚಮಚ ಜೇನು ತುಪ್ಪಕ್ಕೆ ಮೊಟ್ಟೆ ರಸವನ್ನು ಬೆರೆಸಿ ತಲೆಗೆ ಹಚ್ಚಿಕೊಳ್ಳಿ. 20 ನಿಮಿಷ ಬಿಟ್ಟು ತಂಪಾದ ಟವೆಲನ್ನು ಕೂದಲ ಮೇಲಿಡಿ. ನಂತ್ರ ತಲೆಯನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ.
ಕೈ, ಕಾಲುಗಳನ್ನು ತೊಳೆದ ನಂತ್ರ ಕ್ರೀಮ್ ಹಚ್ಚಿ ನಿಧಾನವಾಗಿ ಮಸಾಜ್ ಮಾಡಿ. ಇದ್ರಿಂದ ಕೈ, ಕಾಲುಗಳು ಮೃದುವಾಗುತ್ತವೆ. ಕೈ ಸೌಂದರ್ಯಕ್ಕಾಗಿ ನಿಂಬೆ ರಸಕ್ಕೆ ಸಕ್ಕರೆ ಬೆರೆಸಿ ಮಸಾಜ್ ಮಾಡಬಹುದು.
ಮೂರು ಚಮಚ ಗುಲಾಬಿ ರಸಕ್ಕೆ ಒಂದು ಚಮಚ ಗ್ಲಿಸರಿನ್ ಅಥವಾ ನಿಂಬೆ ರಸವನ್ನು ಮಿಕ್ಸ್ ಮಾಡಿ. ಇದನ್ನು ಕೈ, ಕಾಲಿಗೆ ಹಚ್ಚಿಕೊಂಡು ಅರ್ಧ ಗಂಟೆ ನಂತ್ರ ಶುದ್ಧವಾದ ನೀರಿನಲ್ಲಿ ತೊಳೆಯಿರಿ.
ಮುಖದ ಸೌಂದರ್ಯ ಹೆಚ್ಚಿಸಲು ಜೇನುತುಪ್ಪವನ್ನು ಮೊಟ್ಟೆಯ ಬಿಳಿ ಭಾಗದೊಂದಿಗೆ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. 20 ನಿಮಿಷಗಳ ನಂತ್ರ ಸ್ವಚ್ಛ ನೀರಿನಲ್ಲಿ ಮುಖವನ್ನು ತೊಳೆದುಕೊಳ್ಳಿ.