ಬಂಗಾರದ ಮೇಲೆ ಭಾರತೀಯರಿಗೆ ವಿಶೇಷ ಒಲವಿದೆ. ಸಣ್ಣ ಸಮಾರಂಭದಿಂದ ಹಿಡಿದು ಮದುವೆ, ಹಬ್ಬಗಳಿಗೂ ಭಾರತೀಯರು ಬಂಗಾರ ಖರೀದಿ ಮಾಡ್ತಾರೆ. ಹಿಂದಿನ ಕಾಲದಲ್ಲಿ ಇದನ್ನು ಹೂಡಿಕೆಯಾಗಿ ಬಂಗಾರ ಖರೀದಿ ಮಾಡ್ತಿರಲಿಲ್ಲ. ಆಗ ಹೂಡಿಕೆ ಮಾಡುವುದು ಸುಲಭವಾಗಿರಲಿಲ್ಲ. ಆದ್ರೀಗ ಬಂಗಾರದ ಮೇಲೆ ಹೂಡಿಕೆ ಮಾಡುವುದು ಸುಲಭ. ಈಗ ಚಿನ್ನದ ಮೇಲೆ ಹೂಡಿಕೆ ಮಾಡಲು ಹಲವು ಮಾರ್ಗಗಳಿವೆ. ಹೂಡಿಕೆದಾರರಿಗೆ ಚಿನ್ನವು ಸುರಕ್ಷಿತ ಹೂಡಿಕೆಯಾಗಿದ್ದು, ಅದನ್ನುಎಕ್ಸ್‌ಚೇಂಜ್ ಟ್ರೇಡೆಡ್ ಫಂಡ್‌ಗಳು ಹಾಗೂ ಮ್ಯೂಚುವಲ್ ಫಂಡ್‌ಗಳು ಮತ್ತು ಷೇರುಗಳ ಮೂಲಕ ಖರೀದಿಸಬಹುದು.
ಸಾರ್ವಭೌಮ ಗೋಲ್ಡ್ ಬಾಂಡ್ (ಎಸ್‌ಜಿಬಿ) : ಎಸ್‌ಜಿಬಿ, ಹೂಡಿಕೆದಾರರಿಗೆ ಭೌತಿಕ ಚಿನ್ನಕ್ಕೆ ಪರ್ಯಾಯವಾಗಿ ಚಿನ್ನವನ್ನು ಸಂಗ್ರಹಿಸಲು ಒಂದು ಮಾರ್ಗವಾಗಿದೆ. ಈ ಯೋಜನೆಯನ್ನು ಭಾರತ ಸರ್ಕಾರ ಪ್ರಾರಂಭಿಸಿದೆ. ಎಸ್‌ಜಿಬಿಗಳನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2015 ರ ಕೊನೆಯಲ್ಲಿ ನೀಡಿತ್ತು. ಈ ಯೋಜನೆಯು 5 ವರ್ಷಗಳ ಲಾಕ್-ಇನ್ ಅವಧಿಯನ್ನು ಹೊಂದಿದೆ. ಅವಧಿ ಮುಕ್ತಾಯಗೊಂಡ ನಂತರ ಹೂಡಿಕೆ ಹಣವನ್ನು ನಗದು ರೂಪದಲ್ಲಿ ಪಡೆಯಬಹುದು.
ಡಿಜಿಟಲ್ ಚಿನ್ನ : ಇದು ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರಸಿದ್ಧಿ ಪಡೆಯುತ್ತಿದೆ. ವಿವಿಧ ವೇದಿಕೆಗಳ ಮೂಲಕ ಚಿನ್ನವನ್ನು ಡಿಜಿಟಲ್ ರೂಪದಲ್ಲಿ ಖರೀದಿಸಬಹುದು. ಡಿಜಿಟಲ್ ಚಿನ್ನದ ಕನಿಷ್ಠ ಹೂಡಿಕೆಯ ಮೊತ್ತ ಒಂದು ರೂಪಾಯಿಯಾಗಿರುತ್ತದೆ. ಈ ಚಿನ್ನವನ್ನು ಭೌತಿಕ ಚಿನ್ನದ ರೂಪದಲ್ಲಿ ಪಡೆಯಬಹುದು.
ಚಿನ್ನದ ವಿನಿಮಯ-ವ್ಯಾಪಾರ : ಚಿನ್ನದ ಇಟಿಎಫ್‌ಗಳು ಷೇರು ಮಾರುಕಟ್ಟೆಯಲ್ಲಿ ವಹಿವಾಟು ನಡೆಸುವ ಹೂಡಿಕೆಗಳಾಗಿವೆ. ಗೋಲ್ಡ್ ಇಟಿಎಫ್‌ಗಳಲ್ಲಿ ಹೂಡಿಕೆ ಮಾಡಲು ಬ್ಯಾಂಕಿನಲ್ಲಿ ಡಿಮ್ಯಾಟ್ ಖಾತೆಯನ್ನು ಹೊಂದಿರಬೇಕು.
ಗೋಲ್ಡ್ ಮ್ಯೂಚುಯಲ್ ಫಂಡ್ : ಇದು ವಿವಿಧ ಹೂಡಿಕೆದಾರರ ಹೂಡಿಕೆಗಳನ್ನು ಒಟ್ಟುಗೂಡಿಸಿ ನಿರ್ದಿಷ್ಟ ಯೋಜನೆಯಲ್ಲಿ ಹೂಡಿಕೆ ಮಾಡುವ ಯೋಜನೆಯಾಗಿದೆ. ಗೋಲ್ಡ್ ಮ್ಯೂಚುಯಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ಡಿಮ್ಯಾಟ್ ಖಾತೆ ಅಗತ್ಯವಿಲ್ಲ.