ಥೈರಾಯ್ಡ್ ಗ್ರಂಥಿಯಲ್ಲಿ ಥೈರಾಕ್ಸಿನ್ ಹಾರ್ಮೋನ್ ಗಳು ಕಡಿಮೆಯಾದಾಗ ಅದನ್ನು ಹೈಪೋಥೈರಾಯ್ಡಿಸಮ್ ಎಂದೂ ಮತ್ತು ಹಾರ್ಮೋನುಗಳು ಹೆಚ್ಚಾದಾಗ ಹೈಪರ್ಥೈರೈಡಿಸಮ್ ಎಂದೂ ಕರೆಯಲಾಗುತ್ತದೆ.
ಇದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಇದ್ರಿಂದ ತೂಕ ಹೆಚ್ಚಾಗುತ್ತದೆ. ವೈದ್ಯರ ಪ್ರಕಾರ ಆರೋಗ್ಯಕರ ಆಹಾರ ಹಾಗೂ ನಿಯಮಿತ ವ್ಯಾಯಾಮದ ಅಭ್ಯಾಸ ಇಟ್ಟುಕೊಂಡರೆ ತೂಕವನ್ನು ನಿಯಂತ್ರಣದಲ್ಲಿಡಲು ಸಾಧ್ಯ.
ಥೈರಾಯ್ಡ್ ನಿಂದ ಬಳಲುವವರು ಬೆಳಿಗ್ಗೆ ಎಂದೂ ಹಸಿವಿನಿಂದ ಇರಬಾರದು. ನಮ್ಮ ದೇಹಕ್ಕೆ ಸಾಕಷ್ಟು ಶಕ್ತಿ ಸಿಗೋದು ಬೆಳಗಿನ ಆಹಾರದಿಂದ. ಬೆಳಗಿನ ಆಹಾರ ಸೇವನೆ ಮಾಡದೆ ಹೋದಲ್ಲಿ ದೇಹದ ಚಯಾಪಚಯ ಕ್ರಿಯೆಗಳು ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ. ಇದ್ರಿಂದ ಆರೋಗ್ಯ ಮತ್ತಷ್ಟು ಏರುಪೇರಾಗುತ್ತದೆ.
ದಿನವಿಡೀ ಸಾಕಷ್ಟು ನೀರು ಕುಡಿಯಬೇಕು. ಇದರಿಂದ ಜೀರ್ಣಕ್ರಿಯೆ ಸರಿಯಾಗಿ ಆಗುತ್ತದೆ. ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಇದು ಸಹಕಾರಿ. ಕನಿಷ್ಟ 3 ಲೀಟರ್ ನೀರನ್ನು ಪ್ರತಿ ದಿನ ಸೇವಿಸಬೇಕು.
ಕಡಿಮೆ ಕೊಬ್ಬಿನ ಆಹಾರವನ್ನು ಸೇವನೆ ಮಾಡಿ. ಅಯೋಡಿನ್ ಹೆಚ್ಚಿನ ಪ್ರಮಾಣದಲ್ಲಿ ಇರುವ ಆಹಾರವನ್ನು ಸೇವಿಸಿ.
ಮೈದಾ ಬದಲು ಧಾನ್ಯಗಳು ಅಥವಾ ಗೋಧಿ ರೊಟ್ಟಿ ಆರೋಗ್ಯಕ್ಕೆ ಉತ್ತಮ. ಇದರಲ್ಲಿ ಕೊಬ್ಬಿನ ಅಂಶ ಕಡಿಮೆ ಇದ್ದು, ಇದು ರಕ್ತದಲ್ಲಿನ ಸಕ್ಕರೆ ಕಡಿಮೆ ಮಾಡಿ ದೇಹದ ತೂಕವನ್ನು ನಿಯಂತ್ರಿಸುತ್ತದೆ.
ಫೈಬರ್ ಯುಕ್ತ ಆಹಾರ ಜೀರ್ಣಕ್ರಿಯೆಯನ್ನು ಸರಿಯಾಗಿಸುತ್ತದೆ. ಮಲಬದ್ಧತೆ ಮತ್ತು ದೇಹದ ಉರಿಯೂತವನ್ನು ತಡೆಯುತ್ತದೆ. ಹಾಗಾಗಿ ಆಹಾರದಲ್ಲಿ ಫೈಬರ್ ಅಂಶವಿರಲಿ.
ಟೀ ಬದಲು ಗ್ರೀನ್ ಟೀ ಕುಡಿಯಿರಿ. ಹೈಪೋಥೈರಾಯ್ಡಿಸಮ್ ಇರುವವರು ಗ್ರೀನ್ ಟೀ ಕುಡಿಯಬೇಕು. ಇದು ಹೆಚ್ಚಿನ ಪ್ರಮಾಣದ ರೋಗ ನಿರೋಧಕಗಳನ್ನು ಹೊಂದಿದೆ. ಕೊಬ್ಬನ್ನು ತ್ವರಿತವಾಗಿ ಕರಗಿಸಲು ಸಹಾಯ ಮಾಡುತ್ತದೆ.