ಇತ್ತೀಚಿನ ದಿನಗಳಲ್ಲಿ ಕಲುಷಿತ ವಾತಾವರಣ ಹಾಗೂ ಕೆಲಸದ ಒತ್ತಡ ಮನುಷ್ಯನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಕೆಟ್ಟ ಜೀವನ ಶೈಲಿಯಿಂದಾಗಿ ಪ್ರತಿಯೊಬ್ಬರೂ ಒಂದಲ್ಲ ಒಂದು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ.
ಅನಾರೋಗ್ಯ ಕಾಣಿಸಿಕೊಂಡಾಗ ಒಂದಿಷ್ಟು ಮಾತ್ರೆ ಸೇವಿಸಿ ತಾತ್ಕಾಲಿಕವಾಗಿ ಗುಣಮುಖರಾಗ್ತಾರೆ. ಮತ್ತೆ ಕೆಲ ದಿನಗಳಲ್ಲಿಯೇ ಇನ್ನೊಂದು ಸಮಸ್ಯೆ ಕಾಡಲು ಶುರುವಾಗುತ್ತದೆ. ಸಣ್ಣ ಸಣ್ಣ ಅನಾರೋಗ್ಯ ಕೂಡ ನಿರ್ಲಕ್ಷ್ಯ ಮಾಡಿದ್ರೆ ದೊಡ್ಡ ಸಮಸ್ಯೆಯಾಗಬಹುದು.
ನಮ್ಮ ಆರೋಗ್ಯ ನಮ್ಮ ಕೈನಲ್ಲಿಯೇ ಇದೆ. ಸಿಕ್ಕ ಸಮಯದಲ್ಲಿಯೇ ನಮ್ಮ ಆರೋಗ್ಯದ ಬಗ್ಗೆ ಗಮನ ನೀಡಿದ್ರೆ ಯಾವುದೇ ಸಣ್ಣಪುಟ್ಟ ರೋಗವೂ ಬಳಿ ಸುಳಿಯದಂತೆ ನೋಡಿಕೊಳ್ಳಬಹುದು.
ರಾತ್ರಿ ತಡವಾಗಿ ಮಲಗಿ ಬೆಳಿಗ್ಗೆ 11 ಗಂಟೆಯಾದ್ರೂ ಹಾಸಿಗೆ ಬಿಡದವರ ಸಂಖ್ಯೆ ಈಗ ಹೆಚ್ಚಾಗಿದೆ. ಬೇಗ ಮಲಗಿ ಬೇಗ ಏಳುವ ಪದ್ಧತಿ ಈಗಿಲ್ಲ. ಇದು ನಮ್ಮೆಲ್ಲ ಅನಾರೋಗ್ಯಕ್ಕೆ ಮುಖ್ಯ ಕಾರಣ. ಬೆಳಿಗ್ಗೆ ಸೂರ್ಯೋದಯವಾಗುವ ಮೊದಲು ಏಳುವ ಅಭ್ಯಾಸ ಮಾಡಿಕೊಂಡ್ರೆ ಆರೋಗ್ಯ ವೃದ್ಧಿಯಾದಂತೆ ಅರ್ಥ.
ಬೆಳಿಗ್ಗೆ ಅಥವಾ ಸಂಜೆ, ದಿನದಲ್ಲಿ ಒಂದು ಅರ್ಧ ಗಂಟೆಯಾದ್ರೂ ಯೋಗ ಮಾಡಿ. ಇದು ದೇಹದ ಜೊತೆ ಮಾನಸಿಕ ಆರೋಗ್ಯ ವೃದ್ಧಿ ಮಾಡುತ್ತದೆ. ಮನಸ್ಸು ಹಾಗೂ ದೇಹ ಸದಾ ಲವಲವಿಕೆಯಿಂದಿರುವಂತೆ ನೋಡಿಕೊಳ್ಳುತ್ತದೆ.
ಸೂರ್ಯನ ಕಿರಣಗಳು ನಮ್ಮ ದೇಹ ಸೇರಬೇಕು. ಸೂರ್ಯನ ಕಿರಣದಲ್ಲಿ ವಿಟಮಿನ್ ಡಿ ಇರುತ್ತದೆ. ಹಾಗಾಗಿ ಪ್ರತಿ ದಿನ ಬೆಳಿಗ್ಗೆ ಸೂರ್ಯನ ಕಿರಣಕ್ಕೆ ಮೈ ಒಡ್ಡುವುದನ್ನು ಮರೆಯಬೇಡಿ.
ಬಾಯಿ ಚಪಲಕ್ಕೆ ಫುಲ್ ಸ್ಟಾಪ್ ಹಾಕಿ. ಪ್ರತಿ ದಿನ ಜಂಕ್ ಫುಡ್ ತಿನ್ನುವ ಹವ್ಯಾಸವಿದ್ದರೆ ಬಿಟ್ಟುಬಿಡಿ.
ಹಣ್ಣುಗಳ ಸೇವನೆಯನ್ನು ಅಭ್ಯಾಸ ಮಾಡಿಕೊಳ್ಳಿ. ಹಣ್ಣು, ಹಸಿರು ತರಕಾರಿಗಳಲ್ಲಿ ವಿಟಮಿನ್ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದು ನಮ್ಮ ದೇಹವನ್ನು ಆರೋಗ್ಯವಾಗಿಡಲು ನೆರವಾಗುತ್ತದೆ.