ಕೆಟ್ಟ ಕೊಬ್ಬಿನಂಶ ಕಡಿತಗೊಳಿಸುವ 10 ಉಪಯುಕ್ತ ಆಹಾರಗಳು ಇವು, ನಿಮ್ಮ ಹೃದಯ ಕಾಯುವ ರಕ್ಷಕರು
ನಮ್ಮ ದೇಹಕ್ಕೆ ಅತ್ಯಂತ ಮಾರಕವಾಗಿ, ಸ್ಥೂಲಕಾಯದ ನಿರ್ಮಾಣದ ಜತೆಗೆ ಹೃದಯದ ಸಾಮರ್ಥ್ಯ ಕುಗ್ಗಿಸುವ ವೈರಿ ಎಂದರೆ ’ಕೆಟ್ಟ ಕೊಬ್ಬಿನಾಂಶ ಅಥವಾ ಬ್ಯಾಡ್ ಕೊಲೆಸ್ಟ್ರಾಲ್’. ಎಣ್ಣೆಯಲ್ಲಿ ಅತಿಯಾಗಿ ಕರಿಯಲಾದ ಬಾಯಿ ರುಚಿಯ ತಿನಿಸುಗಳನ್ನು ಪ್ರತಿದಿನ ಸೇವಿಸುವವರಲ್ಲಿ ಕೆಟ್ಟ ಕೊಬ್ಬಿನಾಂಶದ ಅತಿಯಾದ ಶೇಖರಣೆ ಕಂಡುಬರುತ್ತದೆ. ಇದರಿಂದ ಪಾರಾಗಲು ನಿತ್ಯ ದೈಹಿಕ ವ್ಯಾಯಾಮ ಒಂದು ಉತ್ತಮ ಉಪಾಯವಾದರೆ, ನಾರಿನಂಶ ಇರುವ ಆಹಾರಗಳನ್ನು ನಿಯಮಿತವಾಗಿ ನಿತ್ಯದ ಊಟ-ತಿಂಡಿಯಂತೆ ತಿನ್ನುತ್ತಿರುವುದು ಕೂಡ ಪರಿಣಾಮಕಾರಿ ಅಂಶವಾಗಿದೆ.
ಅಂಥ 10 ತಿನಿಸುಗಳ ಪಟ್ಟಿಯನ್ನು ಅಧ್ಯಯನದಿಂದ ಪತ್ತೆ ಮಾಡಿರುವ ಹಾರ್ವರ್ಡ್ ಮೆಡಿಕಲ್ ಸ್ಕೂಲ್, ನಿಮಗಾಗಿ ಇಲ್ಲಿ ಕೊಟ್ಟಿದೆ,
ಓಟ್ಸ್: ಸುಲಭವಾಗಿ ಜೀರ್ಣವಾಗುವ, ಅತಿಹೆಚ್ಚು ನಾರಿನ ಅಂಶ ಇರುವ ಆಹಾರವಿದು. ಇದರಲ್ಲಿ ‘ಬಿಟಾ ಗ್ಲೂಕನ್’ ಇದ್ದು, ಜೀರ್ಣಕ್ರಿಯೆಯನ್ನು ನಿಧಾನವಾಗಿಸಲು ಸಹಕಾರಿ ಆಗಿದೆ. ಹಾಗಾಗಿ ಹಸಿವಾಗುವಿಕೆಯ ಸಮಯವನ್ನು ಕೂಡ ಮುಂದೆ ತಳ್ಳುತ್ತದೆ. ಆದರೆ ದೇಹಕ್ಕೆ ಅಗತ್ಯ ಶಕ್ತಿಯನ್ನು ಕೊಡುತ್ತಿರುತ್ತದೆ. ನಿತ್ಯ 20-35 ಗ್ರಾಮ್ ನಾರಿನ ಅಂಶವು ದೇಹಕ್ಕೆ ಬಹಳ ಆರೋಗ್ಯಕರವಾಗಿದ್ದು, ಆ ಪೈಕಿ 5-10 ಗ್ರಾಮ್ ಓಟ್ಸ್ ಮೂಲಕ ಪೂರೈಸಬಹುದು.
ಬಾರ್ಲಿ: ದೇಹಕ್ಕೆ ತಂಪು, ಸುಲಭವಾಗಿ ಜೀರ್ಣವಾಗುವ ನಾರಿನಂಶ ಹೊಂದಿರುತ್ತದೆ. ಹೃದಯದ ಸಮಸ್ಯೆಯನ್ನು ತಗ್ಗಿಸುವಲ್ಲಿ ಉಪಯುಕ್ತ.
ಬೀನ್ಸ್/ಕಾಳುಗಳು: ಪದೇಪದೆ ತಿನ್ನಲು ಮುಂದಾಗದಂತೆ ತಡೆಯುವಲ್ಲಿ ಈ ಬೀನ್ಸ್ ಸಹಕಾರಿ. ರಾಜ್ಮಾ, ಕಪ್ಪು ಬಟಾಣಿಗಳಂತಹ ಕಾಳುಗಳು ದೇಹಕ್ಕೆ ಅಗತ್ಯ ಪೌಷ್ಠಿಕಾಂಶ ಪೂರೈಸಿ, ಸುಸ್ತಾಗದಂತೆ ನೋಡಿಕೊಳ್ಳುತ್ತವೆ.
ಎಗ್‌ಪ್ಲಾಂಟ್ ಮತ್ತು ಒಕ್ರಾ: ಇದನ್ನು ಸಾಮಾನ್ಯವಾಗಿ ಬದನೆಕಾಯಿ ಹಾಗೂ ಬೆಂಡೆಕಾಯಿ ಎಂದು ಕರೆಯುತ್ತೇವೆ. ರೊಟ್ಟಿ ಅಥವಾ ಚಪಾತಿ ಜತೆಗೆ ಪಲ್ಯ ಮಾಡಿಕೊಂಡು ಇವುಗಳನ್ನು ಹೆಚ್ಚಾಗಿ ಸೇವನೆ ಮಾಡುವುದು ಒಳ್ಳೆಯದು. ಗೆಣಸು, ಬ್ರೊಕೊಲಿ ಕೂಡ ಉತ್ತಮ ಆಯ್ಕೆಗಳು.
ನಟ್ಸ್/ಡ್ರೈಫ್ರೂಟ್ಸ್ : ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಇರಿಸಲು ಇವುಗಳು ಉಪಕಾರಿ ಆಗಿವೆ. ಸೂಕ್ಷ ಪೌಷ್ಟಿಕಾಂಶಗಳ (ಮೆಗ್ನೀಶಿಯಂ, ಪೊಟಾಶಿಯಂ, ವಿಟಮಿನ್ ಇ) ಪೂರೈಕೆ ಇವುಗಳಿಂದ ಮಾತ್ರವೇ ಸಾಧ್ಯ. ನಿತ್ಯ ಒಂದು ಮುಷ್ಟಿಯಷ್ಟು ವಿವಿಧ ನಟ್ಸ್‌ಗಳ ಸೇವನೆ ದೇಹದ ಕೆಟ್ಟ ಕೊಬ್ಬಿನ ಅಂಶವನ್ನು (ಎಲ್‌ಡಿಎಲ್- ಲೋ ಡೆನ್ಸಿಟಿ ಲಿಪೊ ಪ್ರೊಟೀನ್) ಶೇ. 5ರಷ್ಟು ಕಡಿತ ಮಾಡುತ್ತದೆ ಎಂದು ಅಧ್ಯಯನಗಳು ಹೇಳಿವೆ.
ಹಣ್ಣುಗಳು: ಸೇಬು, ದ್ರಾಕ್ಷಿ, ಸ್ಟ್ರಾಬೆರ್ರಿ, ಹುಳಿ ಅಂಶ ಇರುವ ಹಣ್ಣುಗಳು, ಪಪ್ಪಾಯ, ಟೊಮ್ಯಾಟೊದಲ್ಲಿ ‘ಪೆಕ್ಟಿನ್’ ಎಂಬ ನಾರಿನ ಅಂಶ ಹೆಚ್ಚಿರುತ್ತದೆ. ಇದು ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ.
ವೆಜಿಟೆಬಲ್ ಆಯಿಲ್: ಪ್ರಾಣಿಗಳ ಕೊಬ್ಬಿನಿಂದ ತಯಾರಾಗುವ ಕೆಲವು ದಿನಬಳಕೆ ಎಣ್ಣೆಗಳು ದೇಹಕ್ಕೆ ಅಪಾಯ ತಂದೊಡ್ಡುತ್ತವೆ. ಕಲಬೆರೆಕೆ ಮೂಲಕ ಇವುಗಳು ಎಣ್ಣೆಗಳಲ್ಲಿ ಅಡಕವಾಗಿರುತ್ತವೆ.
ಸೋಯಾ: ಸೋಯಾ ಬೀನ್ಸ್ ಮತ್ತು ಸೋಯಾ ಮಿಲ್ಕ್ ಕೊಲೆಸ್ಟ್ರಾಲ್ ಪ್ರಮಾಣ ಇಳಿಕೆಯಲ್ಲಿ ವಿಶೇಷ ಪಾತ್ರವಹಿಸುತ್ತವೆ. ಮಾಂಸ ಸೇವನೆ ಕಡಿಮೆ ಮಾಡಿ, ಪರ್ಯಾಯವಾಗಿ ಸೋಯಾ ಬಳಸುವುದು ಉತ್ತಮ ಗುಣಮಟ್ಟದ ಕೊಬ್ಬಿನಂಶವನ್ನು ದೇಹಕ್ಕೆ ಒದಗಿಸಿ ಲವಲವಿಕೆಯನ್ನು ನೀಡುತ್ತದೆ.
ಫ್ಯಾಟಿ ಫಿಷ್ : ಒಮೆಗಾ-3 ಫ್ಯಾಟ್ ಎಂಬ ಕೊಬ್ಬು ದೇಹಕ್ಕೆ ಉತ್ತಮ ಬೆಳವಣಿಗೆ ನೀಡಬಲ್ಲದು. ಹೃದಯದ ಬಡಿತ ಚೆನ್ನಾಗಿ ಇರಿಸಲು ನೆರವಾಗುತ್ತವೆ. ರಕ್ತದೊತ್ತಡ ಕೂಡ ನಿಯಂತ್ರಣದಲ್ಲಿ ಇರಿಸುತ್ತವೆ. ದೇಹದೊಳಗಿನ ಉರಿಯೂತ ಕಡಿಮೆಗೊಳಿಸಿ, ರಕ್ತನಾಳಗಳ ಸರಾಗ ಕಾರ್ಯಕ್ಕೆ ಒತ್ತು ನೀಡುತ್ತವೆ. ತರಕಾರಿಗಳಲ್ಲಿ ಹೆಚ್ಚಾಗಿ ಇದು ಅಡಕವಾಗಿದೆ. ಹಸಿ ತರಕಾರಿಗಳ ಸೇವನೆಯಿಂದ ದೇಹಕ್ಕೆ ಲಭ್ಯವಾಗುತ್ತದೆ.
ಫೈಬರ್ ಸಪ್ಲಿಮೆಂಟ್: ನಾರಿನ ಅಂಶಗಳು ಖಾದ್ಯಗಳ ರೂಪದಲ್ಲಿ ಕೂಡ ಮಾರುಕಟ್ಟೆಯಲ್ಲಿ ಲಭ್ಯವಿದೆ. ಅವುಗಳನ್ನು ನುರಿತ ನ್ಯೂಟ್ರೀಷನಿಸ್ಟ್‌ಗಳಿಂದ ಕೇಳಿ ಪಡೆದುಕೊಂಡರೆ, ಮಲವು ಸರಾಗವಾಗಿ ಹೊರಬರಲು ಕೂಡ ನೆರವಾಗಿ ದೇಹವನ್ನು ಹಗುರಗೊಳಿಸುತ್ತವೆ. ನಿತ್ಯ 4 ಗ್ರಾಮ್ ಫೈಬರ್ ಸಪ್ಲಿಮೆಂಟ್ ಸೇವನೆ ಆರೋಗ್ಯಕರವಂತೆ.