ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಕೋಳಿ ಹಾಕಿದ 210 ಗ್ರಾಂ ಮೊಟ್ಟೆಯು ಭಾರತದ ಅತಿದೊಡ್ಡ ಮೊಟ್ಟೆ ಎಂದು ರಾಷ್ಟ್ರೀಯ ದಾಖಲೆ ಬರೆಯುವ ಸಾಧ್ಯತೆ ಇದೆ.
ಮಾಧ್ಯಮ ವರದಿಯ ಪ್ರಕಾರ, ಕೋಳಿಯು ಕೊಲ್ಹಾಪುರ ಜಿಲ್ಲೆಯ ತಾಲ್ಸಂದೆ ಗ್ರಾಮದ ಕೋಳಿ ಫಾರಂಗೆ ಸೇರಿದೆ. ಹೈ- ಲೈನ್ ಮತ್ತು ಡಬ್ಲ್ಯು- 80 ತಳಿಯ ಈ ಕೋಳಿ ಮೊಟ್ಟೆಯೊಳಗೆ ಮೂರರಿಂದ ನಾಲ್ಕು ಹಳದಿ ಲೋಳೆಗಳು ಇರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.
ಅಕ್ಟೋಬರ್ 16 ರ ಭಾನುವಾರದಂದು ಚವನ್ ಮಾಲಾ ಪ್ರದೇಶದ ಈ ಕೋಳಿ ಫಾರಂನ ಮಾಲೀಕರಾದ ದಿಲೀಪ್ ಚವಾಣ್ ಅವರು ದೈತ್ಯ ಮೊಟ್ಟೆಯನ್ನು ಮೊದಲು ನೋಡಿದ್ದಾರೆ.
ಚವ್ಹಾಣ್ ನಾಲ್ಕು ದಶಕಗಳಿಂದ ಕೋಳಿ ಸಾಕಾಣಿಕೆ ವ್ಯವಹಾರದಲ್ಲಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಒಮ್ಮೆಯೂ ಈ ರೀತಿಯ ದೊಡ್ಡ ಮೊಟ್ಟೆಯನ್ನು ನೋಡಿರಲಿಲ್ಲವಂತೆ. ಮೊದಲಿಗೆ ಮೊಟ್ಟೆಯನ್ನು ಅಳೆಯಲಾಯಿತು. ಮೊಟ್ಟೆ ಸುಮಾರು 200 ಗ್ರಾಂ ಇತ್ತು, ಆದರೆ ಸೋಮವಾರ ಮಾಲೀಕರು ಮತ್ತೊಮ್ಮೆ ಕ್ರಾಸ್ ಚೆಕ್ ಮಾಡಿದಾಗ 210 ಗ್ರಾಂ ತೂಕವಿತ್ತು. ಮೊಟ್ಟೆಯ ತೂಕವನ್ನು ಮಾಲೀಕರು ಮೂರು ವಿಭಿನ್ನ ತೂಕದ ಮಾಪಕಗಳೊಂದಿಗೆ ಪರಿಶೀಲಿಸಿ ಅದರ ತೂಕ 210 ಗ್ರಾಂ ಎಂದು ದೃಢಪಡಿಸಿದ್ದಾರೆ.
ಪ್ರಸ್ತುತ ಭಾರತದಲ್ಲಿ ಲಿಮ್ಕಾ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲಾದ ಅತಿದೊಡ್ಡ ಮೊಟ್ಟೆಯ ದಾಖಲೆಯು ಪಂಜಾಬ್‌ನಲ್ಲಿ ಕೋಳಿಯೊಂದರ ಹೆಸರಿನಲ್ಲಿದೆ. ಅದು 162 ಗ್ರಾಂ ತೂಕದ ಮೊಟ್ಟೆಯನ್ನು ಇಟ್ಟಿತ್ತು, ಅದು ಸುಮಾರು 10 ಸೆಂಟಿಮೀಟರ್ ಉದ್ದ ಮತ್ತು 5 ಸೆಂಟಿಮೀಟರ್ ವ್ಯಾಸವನ್ನು ಹೊಂದಿತ್ತು.
ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಪ್ರಕಾರ 1956 ರಲ್ಲಿ ಯುಎಸ್‌ಎನಲ್ಲಿ ಕೋಳಿಯೊಂದು ವಿಶ್ವದಲ್ಲೇ ಅತ್ಯಂತ ಭಾರವಾದ ಮೊಟ್ಟೆಯನ್ನು ಇಡುತ್ತಿತ್ತು ಎಂದು ವರದಿಯಾಗಿದೆ. ಎರಡು ಹಳದಿ ಲೋಳೆಯನ್ನು ಹೊಂದಿರುವ ದೊಡ್ಡ ಮೊಟ್ಟೆಯು ಸುಮಾರು 454 ಗ್ರಾಂ ತೂಕವಿತ್ತು.