ಕೇರಳದಲ್ಲಿ ಆಡಳಿತಾರೂಢ ಸಿಪಿಐ(ಎಂ) ಶಾಸಕ ಮತ್ತು ನಟ ಮುಕೇಶ್ ವಿರುದ್ಧ ನಟಿಯೊಬ್ಬರು ಲೈಂಗಿಕ ಕಿರುಕುಳದ ಆರೋಪ ಮಾಡಿದ ಕೆಲವು ದಿನಗಳ ನಂತರ ಅತ್ಯಾಚಾರ ಪ್ರಕರಣ ದಾಖಲಾಗಿದೆ.
ಮಾರಡ್ ಪೋಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ನಟ, ರಾಜಕಾರಣಿ ಮುಖೇಶ್ ವಿರುದ್ಧ ಜಾಮೀನು ರಹಿತ ಅಪರಾಧದ ಆರೋಪ ಹೊರಿಸಲಾಗಿದೆ.
ಈ ಪ್ರಕರಣವು ಪ್ರತಿಪಕ್ಷಗಳು ಮತ್ತು ಅವರ ಸ್ವಪಕ್ಷದ ಸದಸ್ಯರ ಒತ್ತಡದಿಂದ ಮುಕೇಶ್ ರಾಜೀನಾಮೆಯ ಬೇಡಿಕೆಯನ್ನು ಮತ್ತಷ್ಟು ತೀವ್ರಗೊಳಿಸಿದೆ. ಸಿಪಿಐ ನಾಯಕಿ ಮತ್ತು ಭಾರತೀಯ ಮಹಿಳಾ ರಾಷ್ಟ್ರೀಯ ಒಕ್ಕೂಟ(ಎನ್‌ಎಫ್‌ಐಡಬ್ಲ್ಯು) ಪ್ರಧಾನ ಕಾರ್ಯದರ್ಶಿ ಅನ್ನಿ ರಾಜಾ ಗಂಭೀರ ಆರೋಪಗಳ ಹಿನ್ನಲೆಯಲ್ಲಿ ಮುಖೇಶ್ ರಾಜೀನಾಮೆಗೆ ಒತ್ತಾಯಿಸಿದ್ದಾರೆ.
ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರ ಮೇಲಿನ ವ್ಯವಸ್ಥಿತ ಲೈಂಗಿಕ ದೌರ್ಜನ್ಯದ ಬಗ್ಗೆ ಆಘಾತಕಾರಿ ವಿವರಗಳನ್ನು ಬಹಿರಂಗಪಡಿಸಿದ ಹೇಮಾ ಸಮಿತಿಯ ವರದಿ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಹಿರಿಯ ನಟನ ವಿರುದ್ಧ ಆರೋಪಗಳು ಹೊರಬಿದ್ದಿವೆ.
ಮುಕೇಶ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಮಾಡಿರುವ ನಟಿ, ಸಿನಿಮಾದಲ್ಲಿ ಪಾತ್ರ ಕೊಡಿಸುವುದಾಗಿ ಭರವಸೆ ನೀಡಿ ಕೊಚ್ಚಿಯ ಹೋಟೆಲ್‌ವೊಂದರಲ್ಲಿ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದರು.
ಅದೇ ನಟಿಯ ದೂರಿನ ಮೇರೆಗೆ ನಟ ಜಯಸೂರ್ಯ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಾಗಿದೆ.
ಹೇಮಾ ಸಮಿತಿ ವರದಿ ಬಿಡುಗಡೆಯಾದ ನಂತರ ಹಲವಾರು ಮಹಿಳೆಯರು ಹೊರಬಂದು ದೂರು ದಾಖಲಿಸಿದ ನಂತರ ಮಲಯಾಳಂ ಚಿತ್ರರಂಗದ ನಟರು ಮತ್ತು ನಿರ್ಮಾಪಕರ ವಿರುದ್ಧ ಹದಿನೇಳು ಪ್ರಕರಣಗಳು ದಾಖಲಾಗಿವೆ. ಲೈಂಗಿಕ ದೌರ್ಜನ್ಯದ ಆರೋಪಗಳ ಪ್ರವಾಹದ ನಡುವೆ, ಹಿರಿಯ ನಟ ಮೋಹನ್‌ಲಾಲ್ ಅವರು AMMA ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಕಾರ್ಯಕಾರಿ ಸಮಿತಿಯು ಸಹ ರಾಜೀನಾಮೆ ನೀಡಿದೆ.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಎಲ್ಲಾ ಲೈಂಗಿಕ ದೌರ್ಜನ್ಯ ಆರೋಪಗಳ ತನಿಖೆಗೆ ಏಳು ಸದಸ್ಯರ ಎಸ್‌ಐಟಿ ರಚನೆ ಮಾಡಿದ್ದಾರೆ.