ಬೆಳಗಾವಿ: ಜನರ ಆರೋಗ್ಯವನ್ನು ಕಾಪಾಡಬೇಕಾದ ಆರೋಗ್ಯ ಇಲಾಖೆ ಸಿಬ್ಬಂದಿಗಳೇ ಜಿಲ್ಲಾ ಆರೋಗ್ಯ ಇಲಾಖೆ ಕಚೇರಿಯಲ್ಲಿ ಭರ್ಜರಿ ಎಣ್ಣೆ ಪಾರ್ಟಿ ಮಾಡಿ ಅಮಾನತುಗೊಂಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿಯ ಟಿಳಕವಾಡಿ ವ್ಯಾಕ್ಸಿನ್ ಡಿಪೋದ ಅವರದಲ್ಲಿರುವ ಜಿಲ್ಲಾ ಆರೋಗ್ಯ ಇಲಾಖೆ ಕಚೇರಿಯಲ್ಲಿ ಗಾಂಧಿ ಜಯಂತಿಯಂದು ಸಿಬ್ಬಂದಿಗಳು ಎಣ್ಣೆ ಪಾರ್ಟಿ ಮಾಡಿರುವ ವಿಡಿಯೋ ವೈರಲ್ ಆಗಿತ್ತು. ಗಾಂಧಿ ಜಯಂತಿಯನ್ನು ಜಿಲ್ಲಾಡಳಿತ ಮದ್ಯ, ಮಾಂಸ ಮಾರಾಟವನ್ನು ನಿಷೇಧ ಮಾಡುತ್ತದೆ. ಆದರೆ ಇಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗಳು ಎಣ್ಣೆ ಪಾರ್ಟಿ ಮಾಡಿ ಬೇಜವಾಬ್ದಾರಿ ಮೆರೆದಿರುವ ಬಗ್ಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು.
ಈ ಘಟನೆ ಬೆನ್ನಲ್ಲೇ ಎಚ್ಚೆತ್ತ ಜಿಲ್ಲ ಆರೋಗ್ಯಾಧಿಕಾರಿ ಮಹೇಶ್ ಕೋಣಿ, 7 ಸಿಬ್ಬಂದಿಗಳನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ. ಇನ್ನು ಪ್ರಕರಣದ ಬಗ್ಗೆ ಸ್ಪಷ್ಟನೆ ನೀಡಿರುವ ಆರೋಗ್ಯಾಧಿಕಾರಿ ಇದು ಐದಾರು ತಿಂಗಳ ಹಿಂದೆ ಆರೋಗ್ಯ ಇಲಾಖೆ ಸಿಬ್ಬಂದಿಗಳು ನಡೆಸಿದ್ದ ಪಾರ್ಟಿ ವಿಡಿಯೋ. ಗಾಂಧಿ ಜಯಂತಿಯಂದು ನಡೆದ ವಿಡಿಯೋ ಅಲ್ಲ. ಆದರೆ ಘಟನೆ ಸಂಬಂಧ ಆರೋಗ್ಯ ಇಲಾಖೆಯ 7 ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಪಾರ್ಟಿಯಲ್ಲಿದ್ದ ಡಿಹೆಚ್ ಒ ಕಾರು ಚಾಲಕ ಮಂಜುನಾಥ್ ಪಾಟೀಲ್, ಮಹೇಶ್ ಹಿರೇಮಠ, ಸತ್ಯಪ್ಪ ತಮ್ಮಣ್ಣವರ್, ಅನಿಲ್ ತಿಪ್ಪನ್ನವರ್, ರಮೇಶ್ ನಾಯಕ್, ಯಲ್ಲಪ್ಪ ಮುನವಳ್ಳಿ, ದೀಪಕ ಗಾವಡೆ ಸೇರಿದಂತೆ 7 ಜನರು ಅಮಾನತುಗೊಂಡವರು.