ಬೆಂಗಳೂರು: ಕಳ್ಳತನ, ಸುಲಿಗೆ, ಕಿರುಕುಳ, ರೋಡ್ ರೋಮಿಯೋಗಳು ಸೇರಿದಂತೆ ಅಪರಾಧ ಪ್ರಕರಣಗಳು ನಡೆದರೆ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಮಾಹಿತಿ ನೀಡಬಹುದಿತ್ತು. ಇನ್ಮುಂದೆ ಟ್ರಾಫಿಕ್ ಸಮಸ್ಯೆಗಳು ಎದುರಾದಾಗಲೂ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಬಹುದಾಗಿದೆ.
ಟ್ರಾಫಿಕ್ ಜಾಮ್, ಒನ್ ವೇ ಡ್ರೈವಿಂಗ್, ನೋ ಪಾರ್ಕಿಂಗ್ ನಲ್ಲಿ ವಾಹನ ನಿಲುಗಡೆ, ಸಿಗ್ನಲ್ ಗಳಲ್ಲಿ ಗಲಾಟೆ ಹೀಗೆ ಸಂಚಾರಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳು ಆದರೆ 112 ಈ ಸಂಖ್ಯೆಗೆ ಕರೆ ಮಾಡಬಹುದಾಗಿದೆ.
ನಾಗರಿಕರೊಬ್ಬರು ಜನಸಂಪರ್ಕ ಸಭೆಯಲ್ಲಿ ಸೂಚಿಸಿದಂತೆ ಈಗ ಸಂಚಾರ ವಿಭಾಗದ ಸಮಸ್ಯೆಗಳನ್ನು ಕೂಡ 112 ಮೂಲಕ ದಾಖಲಿಸಲು ಮತ್ತು ಪರಿಹಾರ ಕಂಡುಕೊಳ್ಳಲು ಅನುವು ಮಾಡಿಕೊಡಲಾಗಿದೆ. ಈ ರೀತಿ ಸಂಚಾರ ಸಮಸ್ಯೆಗಳನ್ನು ಹೊಯ್ಸಳ ಬದಲಾಗಿ ದ್ವಿಚಕ್ರವಾಹನ ಮೇಲಿನ ಸಂಚಾರಿ ಪೊಲಿಸ್ ವಿಭಾಗದ ಸಿಬ್ಬಂದಿಗಳು (ಕೋಬ್ರಾ)ನಿರ್ವಹಿಸಲಿದ್ದಾರೆ.
ಕರೆ ಮಾಡಿದ ಕೆಲವೇ ಕ್ಷಣಗಳಲ್ಲಿ ಕೋಬ್ರಾ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಸಮಸ್ಯೆ ಬಗೆಹರಿಸಲಿದ್ದಾರೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.