
ಪಾಣಿಪತ್ ನ ತೆಹಸಿಲ್ ಕ್ಯಾಂಪ್ ರಸ್ತೆಯಲ್ಲಿರುವ ಪಿಜ್ಜಾ ಪಾಯಿಂಟ್ ಒಂದರಲ್ಲಿ ಯುವತಿ ತಮ್ಮ ಕುಟುಂಬ ಸದಸ್ಯರ ಜೊತೆ ಆಹಾರ ಸೇವನೆ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಪಿಜ್ಜಾ ಖರೀದಿಸುವ ಗ್ರಾಹಕನ ಸೋಗಿನಲ್ಲಿ ಯುವಕನೊಬ್ಬ ಬಂದಿದ್ದಾನೆ. ಆತ ಯುವತಿ ಕುಳಿತಿದ್ದ ಟೇಬಲ್ ಬಳಿಯೇ ಪಿಜ್ಜಾ ಪಾರ್ಸೆಲ್ ತೆಗೆದುಕೊಂಡು ಹೋಗುವಂತೆ ನಟಿಸಿ ನಿಂತಿದ್ದಾನೆ.
ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದ ಆತ ಯುವತಿ ಕೊರಳಿನಲ್ಲಿದ್ದ 20 ಗ್ರಾಂ ತೂಕದ ಚಿನ್ನದ ಸರವನ್ನು ಕ್ಷಣಾರ್ಧದಲ್ಲಿ ಕಿತ್ತುಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ. ಏಕಾಏಕಿ ನಡೆದ ಈ ಘಟನೆಯಿಂದ ಕಂಗಾಲಾದ ಯುವತಿ ಮತ್ತು ಆಕೆಯ ಕುಟುಂಬ ಶಾಕ್ ನಿಂದ ಚೇತರಿಸಿಕೊಂಡು ಆತನನ್ನು ಹಿಡಿಯಲು ಬೆನ್ನಟ್ಟಿದರಾದರೂ ಯಾವುದೇ ಪ್ರಯೋಜನವಾಗಿಲ್ಲ.
ಘಟನೆ ನಡೆದ ಸಂದರ್ಭದಲ್ಲಿ ಪಿಜ್ಜಾ ಶಾಪ್ ನ ಯಾವುದೇ ನೌಕರರು ಸ್ಥಳದಲ್ಲಿ ಇರಲಿಲ್ಲ. ಯುವತಿ ಮತ್ತು ಆಕೆಯ ಕುಟುಂಬ ಸದಸ್ಯರು ಕೂಗಿಕೊಂಡ ವೇಳೆ ಕಿಚನ್ ನಿಂದ ಓಡಿಬಂದು ಅವರು ಸಹ ಕಳ್ಳನನ್ನು ಹಿಡಿಯಲು ಹೋಗಿದ್ದು, ಅಷ್ಟರಲ್ಲಾಗಲೇ ಆತ ಪರಾರಿಯಾಗಿದ್ದ. ಮಧ್ಯಾಹ್ನ 3:30ರ ಸುಮಾರಿಗೆ ಈ ಘಟನೆ ನಡೆದಿದ್ದು, ಸುರಕ್ಷಿತವೆಂದು ಭಾವಿಸುವ ಸ್ಥಳದಲ್ಲಿದ್ದರೂ ಇಂತಹ ಘಟನೆ ನಡೆದಿರುವುದು ಆತಂಕಕ್ಕೀಡು ಮಾಡಿದೆ. ಚಿನ್ನದ ಬೆಲೆ ಗಗನಕ್ಕೇರಿರುವ ಸಂದರ್ಭದಲ್ಲಿ ಶಾಪ್ ಒಳಗಡೆ ಇದ್ದರೂ ಸಹ ಈ ಕೃತ್ಯ ನಡೆದಿರುವುದು ಬೆಚ್ಚಿ ಬೀಳಿಸಿದೆ. ಮಹಿಳೆಯರು ತಮ್ಮ ಆಭರಣಗಳ ಕುರಿತು ಸದಾಕಾಲ ಜಾಗೃತಿಯಿಂದ ಇರುವುದು ಸೂಕ್ತ ಎಂಬದನ್ನು ಈ ಘಟನೆ ಬಿಂಬಿಸಿದೆ.