ಬೆಂಗಳೂರು: ದ್ವಿಚಕ್ರವಾಹನ ಸವಾರರು ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದೆ. ಹೆಲ್ಮೆಟ್ ಹಾಕದಿದ್ದರೆ ದಂಡ ವಿಧಿಸಲಾಗುತ್ತದೆ ಎಂಬ ಕಾರಣಕ್ಕೆ ಅನೇಕರು ಟೋಪಿ ರೀತಿಯ ಅರ್ಧ ಹೆಲ್ಮೆಟ್, ಐಎಸ್ಐ ಮುದ್ರೆ ಇಲ್ಲದ ಹೆಲ್ಮೆಟ್ ಧರಿಸುತ್ತಾರೆ.
ಆದರೆ, ಇಂತಹ ಹೆಲ್ಮೆಟ್ ಗಳನ್ನು ಹಾಕಿದರೆ ಸಂಚಾರ ನಿಯಮ ಪಾಲಿಸಿದಂತಾಗುವುದಿಲ್ಲ. ಇಂತಹ ಹೆಲ್ಮೆಟ್ ಗಳನ್ನು ಬಳಸುವ ಸವಾರರಿಗೆ ಹೆಲ್ಮೆಟ್ ರಹಿತ ಚಾಲನೆ ಎಂದೇ ಪರಿಗಣಿಸಿ ಬೆಂಗಳೂರು ಸಂಚಾರ ಪೊಲೀಸರು ದಂಡ ವಿಧಿಸುತ್ತಿದ್ದಾರೆ.
ಮೋಟಾರ್ ವಾಹನ ನಿಯಮಕ್ಕೆ ತಿದ್ದುಪಡಿ ಮಾಡಲಾಗಿದ್ದು, ರಾಜ್ಯವ್ಯಾಪಿ ಬೈಕ್ ಸವಾರರು ಮತ್ತು ಹಿಂಬದಿ ಸವಾರರು ಐಎಸ್ಐ ಮುದ್ರೆಯ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಿ ಸರ್ಕಾರ ಅಧಿ ಸೂಚನೆ ಹೊರಡಿಸಿದೆ.
ಅರ್ಧ ಹೆಲ್ಮೆಟ್ ನಿಂದ ಸುರಕ್ಷತೆ ಇರುವುದಿಲ್ಲ. ಪ್ರಾಣಕ್ಕೆ ಕುತ್ತು ಬರುತ್ತದೆ. ಹೀಗಾಗಿ ಐಎಸ್ಐ ಮಾರ್ಕ್ ಹೊಂದಿದ ಫುಲ್ ಹೆಲ್ಮೆಟ್ ಕಡ್ಡಾಯ ಮಾಡಲಾಗಿದೆ. ಇಲ್ಲದಿದ್ದರೆ ದಂಡ ವಿಧಿಸಲಾಗುವುದು. ಟೋಪಿ ಮಾದರಿಯ ಅರ್ಧ ಹೆಲ್ಮೆಟ್ ಬಳಸಿದಲ್ಲಿ ಅದನ್ನು ಸಂಚಾರ ನಿಯಮ ಉಲ್ಲಂಘನೆ, ಹೆಲ್ಮೆಟ್ ರಹಿತ ಚಾಲನೆ ಎಂದೇ ಪರಿಗಣಿಸಿ ಕೇಸ್ ದಾಖಲಿಸಲಾಗುತ್ತದೆ ಎಂದು ಹೇಳಲಾಗಿದೆ.