ಕೋಲಾರ: ಡಿಸೆಂಬರ್ 1 ರಿಂದ ಬೈಕ್ ಸವಾರರು ಮತ್ತು ಹಿಂಬದಿ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಹಾಗೂ ಆಟೋಗಳಿಗೆ ಕಡ್ಡಾಯವಾಗಿ ಮೀಟರ್ ಅಳವಡಿಸಬೇಕು. ಈ ಕಾನೂನು ಪಾಲಿಸದವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಾರಿಗೆ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿಗಳ ನ್ಯಾಯಾಂಗ ಸಭಾಂಗಣದಲ್ಲಿ ಸಾರಿಗೆ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸಬೇಕು. ಹೆದ್ದಾರಿಗಳಲ್ಲಿ ವಿದ್ಯುತ್ ದೀಪಗಳನ್ನು ಸಮರ್ಪಕವಾಗಿ ಅಳವಡಿಸಬೇಕು ಎಂದು ಲ್ಯಾಂಕೋ ಅಧಿಕಾರಿಗೆ ಸೂಚಿಸಿದ್ದಾರೆ.
ಒಂದು ವರ್ಷದ ಹಿಂದೆ ನಡೆದ ಸಭೆಯಲ್ಲಿ 14 ಬ್ಲಾಕ್ ಸ್ಟಾಟ್‍ಗಳನ್ನು ಗುರುತಿಸಿ ಸುರಕ್ಷತೆ ಕೈಗೊಳ್ಳವಂತೆ ಲ್ಯಾಂಕೋ ಸಂಸ್ಥೆಗೆ ಸೂಚಿಸಲಾಗಿತ್ತು. ಆದರೆ ಸಂಪೂರ್ಣವಾಗಿ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿ, ಜೀವ ಅತ್ಯಮೂಲ್ಯವಾದದ್ದು ಹೊದ ಜೀವವನ್ನು ತರಲು ಸಾಧ್ಯವಿಲ್ಲ. ಜೀವ ಉಳಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಮುಂದಿನ ತಿಂಗಳು ರಸ್ತೆ ಸುರಕ್ಷತಾ ಸಭೆಯನ್ನು ಕರೆಯಲಾಗುವುದು. 15 ದಿನದೊಳಗೆ 20 ಬ್ಲಾಕ್ ಸ್ಟಾಟ್‍ಗಳಲ್ಲಿ ತಾತ್ಕಾಲಿಕ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. 3 ತಿಂಗಳೊಳಗೆ ಶಾಶ್ವತ ಕ್ರಮಗಳನ್ನು ಪ್ರಾರಂಭಿಸಬೇಕು ಎಂದು ಸೂಚಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಂ.ಆರ್.ರವಿಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಕಳೆದ 6 ತಿಂಗಳಿಂದ ಮಡೇರಹಳ್ಳಿಯ ಬೈಪಾಸ್ ಬಳಿ ವಿವಿಧ ಆಪಘಾತಗಳು ಉಂಟಾಗಿ 7 ಜನರು ಮರಣ ಹೊಂದಿದ್ದಾರೆ. ಅವೈಜ್ಞಾನಿಕವಾದ ಸ್ಟೀಡ್ ಬ್ರೇಕರ್‍ಗಳನ್ನು ತೆಗೆದು ವೈಜ್ಞಾನಿಕ ಸ್ಟೀಡ್ ಬ್ರೇಕರ್‍ಗಳನ್ನು ಅಳವಡಿಸಬೇಕು ಎಂದರು.
ಸಭೆಯಲ್ಲಿ ಕೆ.ಜಿ.ಎಫ್ ಪೊಲೀಸ್ ವರಿಷ್ಠಾಧಿಕಾರಿ ಇಲಕ್ಕಿಯಾ ಕರುಣಾಕರನ್, ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷರಾದ ಹೆಚ್.ಜಾಹ್ನವಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಪ್ರಶಾಂತ್ ಸೇರಿದಂತೆ ಸಾರಿಗೆ ಇಲಾಖೆ, ಕಾರ್ಮಿಕ ಇಲಾಖೆ, ಕೆ.ಎಸ್.ಆರ್.ಟಿ.ಸಿ. ಇಲಾಖೆಗಳ ಅಧಿಕಾರಿಗಳು ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.