ಬೆಂಗಳೂರು: ಲೋಕಸಭೆ ಚುನಾವಣೆ ಪ್ರಚಾರಕ್ಕೆ ನಾಯಕರ ಓಡಾಟಕ್ಕಾಗಿ ಬಹುತೇಕ ಹೆಲಿಕಾಪ್ಟರ್ ಗಳು ಬುಕ್ ಆಗಿವೆ. ರಾಜಕೀಯ ಪಕ್ಷಗಳ ಪ್ರಚಾರದ ಭರಾಟೆ ರಂಗೇರುತ್ತಿದ್ದಂತೆ ವಿವಿಧೆಡೆ ಪ್ರಚಾರಕ್ಕೆ ತೆರಳಲು ಸಮಯ ಅಭಾವದ ಕಾರಣ ಹೆಲಿಕಾಪ್ಟರ್ ಮತ್ತು ಸಣ್ಣ ವಿಮಾನಗಳನ್ನು ಪಕ್ಷಗಳು ಕಾಯ್ದಿರಿಸಿವೆ.
ದಕ್ಷಿಣ ಭಾರತದ ಹೆಲಿಕಾಪ್ಟರ್ ಕಂಪನಿಗಳ ಬಹುತೇಕ ಹೆಲಿಕಾಪ್ಟರ್ ಗಳು, ಜೆಟ್ ಗಳನ್ನು ಬುಕ್ ಮಾಡಲಾಗಿದೆ. ಕಳೆದ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಈ ಬಾರಿ ಶೇಕಡ 20ರಷ್ಟು ದರ ಹೆಚ್ಚಳವಾಗಿದೆ. ಮುಂದಿನ ಒಂದೂವರೆ ತಿಂಗಳಿಗೆ ಖಾಸಗಿ ಏವಿಯೇಷನ್ ಸಂಸ್ಥೆಗಳಿಗೆ ಬಾರಿ ಬೇಡಿಕೆ ಬಂದಿದ್ದು, ಹೆಲಿ ಟೂರಿಸಂ, ಖಾಸಗಿ ಸೇರಿ ಇತರೆ ಉದ್ದೇಶಗಳಿಗಾಗಿರುವ ಹೆಲಿಕಾಪ್ಟರ್, ಪ್ರೈವೇಟ್ ಜೆಟ್ ಗಳನ್ನು ಬಳಕೆ ಮಾಡಿಕೊಳ್ಳಲಾಗುವುದು.
100ಕ್ಕೂ ಅಧಿಕ ಹೆಲಿಕಾಪ್ಟರ್ ಗಳು ಮತ್ತು ಸಣ್ಣ ವಿಮಾನಗಳು ಬುಕ್ ಆಗಿವೆ. ಬೆಂಗಳೂರು ಮಾತ್ರವಲ್ಲದೇ ವಿವಿಧೆಡೆಯೂ ಹೆಲಿಕಾಪ್ಟರ್ ಗಳನ್ನು ಕಾಯ್ದಿರಿಸಲಾಗಿದೆ.
2 ಆಸನದ ಹೆಲಿಕಾಪ್ಟರ್ ಗೆ ಒಂದು ಗಂಟೆಗೆ 2.10 ಲಕ್ಷ ರೂ., 4 ಸೀಟಿನ ಹೆಲಿಕಾಪ್ಟರ್ ಗೆ ಗಂಟೆಗೆ 2.30 ಲಕ್ಷ ರೂ., 6 ಸೀಟಿನ ಮಿನಿ ವಿಮಾನಕ್ಕೆ ಗಂಟೆಗೆ 2.60 ಲಕ್ಷ ರೂ., 8 ಸೀಟಿನ ಮಿನಿ ವಿಮಾನಕ್ಕೆ ಗಂಟೆಗೆ 3.50 ಲಕ್ಷ ರೂ., 13 ಸೀಟಿನ ಮಿನಿ ವಿಮಾನಕ್ಕೆ ಗಂಟೆಗೆ 4 ಲಕ್ಷ ಬಾಡಿಗೆ ಇದೆ.