ಡೆಹ್ರಾಡೂನ್: ಕೇದಾರನಾಥ ಹೆಲಿಪ್ಯಾಡ್‌ನಲ್ಲಿ ಮೇ 31ರಂದು ಲ್ಯಾಂಡ್ ಆಗುತ್ತಿದ್ದ ಹೆಲಿಕಾಪ್ಟರ್ 270 ಡಿಗ್ರಿಗಳಷ್ಟು ಗಿರಕಿ ಹೊಡೆದಿದೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ತನಿಖೆ ಆರಂಭಿಸಿದೆ.
Thumby ಏವಿಯೇಷನ್‌ಗೆ ಸೇರಿದ ಕಾಪ್ಟರ್ ಈ ರೀತಿ ಗಿರಕಿ ಹೊಡೆದಿರುವಂಥದ್ದು. ಈ ಘಟನೆ ಬಳಿಕ, ಕಾಪ್ಟರ್ ಪೈಲಟ್‌ಗಳು ಲ್ಯಾಂಡಿಂಗ್ ಮಾಡುವಾಗ ಟೇಲ್ ವಿಂಡ್ ಇದ್ದರೆ ಆಗ ಹೆಚ್ಚುವರಿ ಎಚ್ಚರಿಕೆ ವಹಿಸಬೇಕು ಎಂದು ಡಿಜಿಸಿಎ ಸೂಚಿಸಿದೆ.
Thumby ಏವಿಯೇಷನ್ ಪ್ರೈವೇಟ್ ಲಿಮಿಟೆಡ್‌ಗೆ ಸೇರಿದ ಬೆಲ್ 407 ಹೆಲಿಕಾಪ್ಟರ್ ಕೇದಾರನಾಥದ ಹೆಲಿಪ್ಯಾಡ್‌ನಲ್ಲಿ ಅಪರಾಹ್ನ 1.30ಕ್ಕೆ ಇಳಿಯುತ್ತಿತ್ತು. ಆಗ ಗಾಳಿಯ ವೇಗ ಹೆಚ್ಚಾಗಿದ್ದ ಕಾರಣ, ಹೆಲಿಪ್ಯಾಡ್‌ನಲ್ಲಿ ಇಳಿಯುತ್ತಿದ್ದ ಕಾಪ್ಟರ್ ನಿಯಂತ್ರಣ ತಪ್ಪಿ ಹೆಲಿಪ್ಯಾಡ್‌ಗೆ ಬಡಿದು ಮೇಲೆದ್ದು 270 ಡಿಗ್ರಿ ಗಿರಕಿ ಹೊಡೆದ ಬಳಿಕ ಪುನಃ ಹೆಲಿಪ್ಯಾಡ್‌ನಲ್ಲಿ ಸ್ಥಿರವಾಗಿ ನಿಂತುಕೊಂಡಿತು. ಇದರ ವಿಡಿಯೋ ಕೂಡ ಲಭ್ಯವಾಗಿದ್ದು, ಡಿಜಿಸಿಎ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದೆ.
ಕೇದಾರನಾಥದ ಹೆಲಿಪ್ಯಾಡ್‌ನಲ್ಲಿ ಪೈಲಟ್‌ಗಳು ಸಾಕಷ್ಟು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಟೇಲ್‌ವಿಂಡ್ ಅಥವಾ ಕ್ರಾಸ್‌ವಿಂಡ್ ಇದ್ದಾಗ ಅವುಗಳ ತೀವ್ರತೆಯನ್ನು ಅಂದಾಜು ಮಾಡಿಕೊಂಡು ಲ್ಯಾಂಡಿಂಗ್ ಮಾಡಬೇಕು. ಸಾಧ್ಯವಾಗದೇ ಇದ್ದರೆ ರಿಸ್ಕ್ ತೆಗೆದುಕೊಳ್ಳಬಾರದು. ವಾಪಸ್ ಬೇಸ್‌ಗೆ ಹಿಂತಿರುಗಬೇಕು ಎಂದು ಪೈಲಟ್‌ಗಳಿಗೆ ಡಿಜಿಸಿಎ ಸಲಹೆ ನೀಡಿದೆ.