ಅಸ್ಸಾಂನ ಸಿಲ್ಚಾರ್‌ನಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (NIT) ಯಲ್ಲಿ ಸಹಾಯಕ ಪ್ರಾಧ್ಯಾಪಕರೊಬ್ಬರು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಅಮಾನತುಗೊಂಡಿದ್ದಾರೆ.
ಇನ್‌ಸ್ಟಿಟ್ಯೂಟ್ ರಿಜಿಸ್ಟ್ರಾರ್ ನೀಡಿದ ಆದೇಶದ ಪ್ರಕಾರ, ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿಭಾಗದ ಡಾ. ಕೋಟೇಶ್ವರ ರಾಜು ಧೇನುಕೊಂಡ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. ಬಿ.ಟೆಕ್ ವಿದ್ಯಾರ್ಥಿನಿಯ ದೂರಿನ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ಪ್ರೊಫೆಸರ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ವಿದ್ಯಾರ್ಥಿಗಳು ರಾತ್ರಿಯಿಡೀ ಪ್ರತಿಭಟನೆ ನಡೆಸಿದ ಬಳಿಕ ಈ ಬೆಳವಣಿಗೆ ನಡೆದಿದೆ.
ಬಲಿಪಶುವಿನ ಪ್ರಕಾರ, ಪ್ರೊಫೆಸರ್ ತನ್ನ ಚೇಂಬರ್‌ಗೆ ಕರೆದಾಗ ಲೈಂಗಿಕ ಕಿರುಕುಳ ನಡೆದಿದೆ. ಇನ್‌ಸ್ಟಿಟ್ಯೂಟ್ ಅಧಿಕಾರಿಗಳಿಗೆ ನೀಡಿದ ಲಿಖಿತ ದೂರಿನಲ್ಲಿ, ಕಡಿಮೆ ಅಂಕಗಳ ಬಗ್ಗೆ ಚರ್ಚಿಸಲು ತನ್ನ ಚೇಂಬರ್‌ಗೆ ಕರೆದ ನಂತರ ಪ್ರೊಫೆಸರ್ ತನ್ನನ್ನು ಅನುಚಿತವಾಗಿ ಸ್ಪರ್ಶಿಸಿದರು ಎಂದು ವಿದ್ಯಾರ್ಥಿನಿ ಹೇಳಿದ್ದಾರೆ.
ʼಅವರು ನನ್ನ ಪಕ್ಕದಲ್ಲಿ ಕುಳಿತುಕೊಳ್ಳಲು ಹೇಳಿ ನಾನು ಕಡಿಮೆ ಅಂಕಗಳನ್ನು ಏಕೆ ಪಡೆಯುತ್ತೇನೆ ಎಂದು ಕೇಳಿದ ನಂತರ ನನ್ನ ಕೈ ಹಿಡಿದು ಬೆರಳುಗಳನ್ನು ಸ್ಪರ್ಶಿಸಲು ಪ್ರಾರಂಭಿಸಿದರು. ತೊಡೆ ಹಿಡಿದು ತಮ್ಮ ಕಂಪ್ಯೂಟರ್‌ನಲ್ಲಿ ಅಶ್ಲೀಲ ಹಾಡುಗಳನ್ನು ಹಾಕಿ ನನ್ನ ಹೊಟ್ಟೆಯನ್ನು ಸ್ಪರ್ಶಿಸಿದರುʼ ಎಂದಿದ್ದಾರೆ.
ಕ್ಯಾಬಿನ್‌ನ ಹೊರಗೆ ಕಾಯುತ್ತಿದ್ದ ಸ್ನೇಹಿತೆ ಕರೆ ಮಾಡಿದ ನಂತರ ತಾನು ತಪ್ಪಿಸಿಕೊಂಡೆ ಎಂದು ವಿದ್ಯಾರ್ಥಿನಿ ಹೇಳಿದ್ದಾರೆ. “ಇದು ಲೈಂಗಿಕ ಕಿರುಕುಳ ಮತ್ತು ಮಾನಸಿಕ ಕಿರುಕುಳದ ಘಟನೆಯಾಗಿದೆ,” ಎಂದು ಅವರು ಹೇಳಿದ್ದಾರೆ.
ಆರೋಪಿತ ಘಟನೆ ನಡೆದ ಚೇಂಬರ್ ಅನ್ನು “ಸೀಲ್” ಮಾಡಲಾಗಿದೆ ಎಂದು ರಿಜಿಸ್ಟ್ರಾರ್ ಹೇಳಿದ್ದಾರೆ. “ಬಲಿಪಶು ಸುರಕ್ಷಿತ ಮತ್ತು ಆರಾಮದಾಯಕವಾಗಿರುವಂತೆ ಎಲ್ಲಾ ಅಗತ್ಯ ಬೆಂಬಲವನ್ನು ನೀಡಲಾಗುತ್ತಿದೆ” ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.
ಪೊಲೀಸರು ಘಟನೆಯನ್ನು ಗಮನಿಸಿದ್ದು, ಆದರೆ ವಿದ್ಯಾರ್ಥಿನಿ ಅಥವಾ NIT ಯಿಂದ ದೂರು ಸ್ವೀಕರಿಸಿಲ್ಲ ಎಂದು ತಿಳಿಸಿದ್ದಾರೆ. ಈ ಬಗ್ಗೆ ಪ್ರೊಫೆಸರ್ ಪ್ರತಿಕ್ರಿಯೆ ಲಭ್ಯವಾಗಿಲ್ಲ.