ಬೆಂಗಳೂರು: ಹೆಬ್ಬಗೋಡಿಯಲ್ಲಿ ನಡೆದಿದ್ದ ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಅಧಿಕರಿಗಳ ವಿರುದ್ಧ ತನಿಖೆ ನಡೆಸುವಂತೆ ರಾಜ್ಯ ಮಾನವ ಹಕ್ಕುಗಳ ಆಯೋಗ ನಗರ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದೆ.
ನ.21ರೊಳಗೆ ಸೂಕ್ತ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದೆ. ಆರ್ ಟಿ ಐ ಕಾರ್ಯಕರ್ತ ವಿಜಯ್ ಡೆನ್ನಿಸ್ ಎಂಬುವವರು ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಪೊಲೀಸ್ ಕಮಿಷ್ನರ್ ಗೆ ಮಾನವ ಹಕ್ಕುಗಳ ಆಯೋಗ ಸೂಚನೆ ನೀಡಿದೆ.
ಮೇ.19ರಂದು ಹೆಬ್ಬಗೋಡಿ ಬಳಿಯ ಗೋಪಾಲರೆಡ್ಡಿ ಫಾರ್ಮ್ ಹೌಸ್ ನಲ್ಲಿ ಎಲ್.ವಾಸು ಎಂಬುವವರ ಹುಟ್ಟುಹಬ್ಬ ಆಚರಣೆ ವೇಳೆ ರೇವ್ ಪಾರ್ಟಿ ದೂರು ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ದಾಳಿ ನಡೆಸಿ ತೆಲುಗು ನಟಿ ಹೇಮಾ ಸೇರಿದಂತೆ ಐವರನ್ನು ಬಂಧಿಸಿದ್ದರು. ಆರೋಪಿಗಳ ವಿರುದ್ಧ ಸುಳ್ಳು ಸಾಕ್ಷ್ಯ ಸೃಷ್ಟಿಸಿದ್ದಲ್ಲದೇ, ಪ್ರಕರಣದ ಅಧಿಕರಿಗಳ ವಿರುದ್ಧ ಮಹಿಳಾ ಆರೋಪಿಗಳನ್ನು ಮಂಚಕ್ಕೆ ಕರೆದ ಆರೋಪ ಕೂಡ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರ ವಿರುದ್ಧ ಸೂಕ್ತ ತನಿಖೆ ನಡೆಸಿ ವರದಿ ನೀಡುವಂತೆ ಮಾನವ ಹಕ್ಕುಗಳ ಆಯೋಗ ಸೂಚಿಸಿದೆ.