ಇತ್ತೀಚೆಗೆ ಉತ್ತರಾಖಂಡದ ಕೇದಾರನಾಥ ದೇಗುಲದ ಬಳಿ ಭಾರೀ ಅವಘಡವೊಂದು ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ.
ಕೇದಾರನಾಥ್ ದೇಗುಲದ ಬಳಿ ಆಗಾಗ ಹಿಮಪಾತ ಸಂಭವಿಸುತ್ತಲೇ ಇರುತ್ತೆ. ಈ ಬಾರಿ ಮತ್ತೆ ಹಿಮಪಾತವಾಗಿದೆ. ಇದರಿಂದಾಗಿ ಭಕ್ತರಲ್ಲಿ ಭೀತಿ ಆವರಿಸಿಕೊಂಡಿದೆ.
ಅದು ಬೆಳ್ಳಂಬೆಳಗ್ಗೆಯ 6.30ರ ಸಮಯ. ಆ ವೇಳೆಗೆ ಕೇದಾರನಾಥ ದೇಗುಲ ಮತ್ತು ಸ್ವರ್ಗಾರೋಹಿ ನಡುವಿನ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಹಿಮಪಾತವಾಗಿದೆ. ಅದು ದೇಗುಲದ ಹಿಂಭಾಗದಲ್ಲಿರುವ ಚೋರಾಬಾರಿ ಕೆರೆಗೆ ಬಿದ್ದಿದೆ.
ಅದರಿಂದಾಗಿ ಸಿಡಿದ ಹಿಮದ ಕೆಲವು ತಂಡುಗಳು ಕೆರೆ ದಂಡೆಯ ಮೇಲೆ ಸಿಡಿದಿದೆ ಎಂದು ಬದರಿನಾಥ-ಕೇದಾರನಾಥ ದೇಗುಲ ಆಡಳಿತ ಮಂಡಳಿಯ ಅಧ್ಯಕ್ಷ ಅಜೇಂದ್ರ ಅಜಯ್ ಹೇಳಿದ್ದಾರೆ.
2013ರಲ್ಲಿ ಉಂಟಾಗಿದ್ದ ಭೀಕರ ಪ್ರವಾಹದಂತೆಯೇ ಹಿಮಪಾತ ಉಂಟಾಯಿತೋ ಎಂಬಂತೆ ಭಕ್ತರು ಭೀತಿಗೆ ಒಳಗಾಗಿದ್ದರು. ಜಾಲತಾಣಗಳಲ್ಲಿ ಹಿಮಪಾತದ ದೃಶ್ಯ ವೈರಲ್ ಆಗಿದೆ.
ಕಳೆದ ಹತ್ತು ದಿನಗಳಲ್ಲಿ ಕೇದಾರನಾಥ ದೇವಾಲಯದ ಹಿಂಭಾಗದಲ್ಲಿರುವ ದೈತ್ಯ ಹಿಮನದಿ ಬಿರುಕು ಬಿಟ್ಟಿರುವುದು ಇದು ಎರಡನೇ ಬಾರಿ. ಸೆಪ್ಟೆಂಬರ್ 22 ರಂದು, ಕೇದಾರನಾಥ ದೇವಾಲಯದ ಸುಮಾರು 5 ಕಿಮೀ ಹಿಂದೆ ಇರುವ ಚೋರಬರಿ ಗ್ಲೇಸಿಯರ್ ಜಲಾನಯನ ಪ್ರದೇಶಕ್ಕೆ ಹಿಮಪಾತವು ಅಪ್ಪಳಿಸಿತು.
ಹೀಗೆ ಪದೇ ಪದೇ ಅನಾಹುತಗಳು ನಡೆಯುತ್ತಿದ್ದರಿಂದ ಮುಂದೆ ಏನಾದರೂ ಅಪಾಯ ಕಾದಿದೆಯೋ ಏನೋ ಅನ್ನೊ ಭಯ ಭಕ್ತರಿಗೆ ಕಾಡುತ್ತಿದೆ.