ಚಿಕ್ಕಮಗಳೂರು: ಕರಾವಳಿ, ಮಲೆನಾಡು ಪ್ರದೇಶಗಳು ವರುಣ ಆರ್ಭಟಕ್ಕೆ ತತ್ತರಿಸಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ನದಿ, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ಸೇತುವೆಗಳು ಜಲಾವೃತಗೊಂಡಿವೆ.
ಕಿಕ್ರೆ ಗ್ರಾಮದಲ್ಲಿ ಪ್ರವಾಹದ ರೀತಿಯಲ್ಲಿ ನದಿ ಹರಿಯುತ್ತಿದ್ದು, ಕಿಕ್ರೆ ಸೇತುವೆ ಸಂಪೂರ್ಣ ನೀರಿನಲ್ಲಿ ಮುಳುಗಿದೆ. ಸೇತುವೆಯ ಮೇಲೆ 4-5 ಅಡಿಗಳಷ್ಟು ನೀರು ರಭಸವಾಗಿ ಹರಿಯುತ್ತಿದ್ದು, ಕಿಕ್ರೆ ಹಾಗೂ ಶೃಂಗೇರಿ ನಡುವಿನ ಸಂಪರ್ಕ ಕಡಿತಗೊಂಡಿದೆ.
ಕಿಕ್ರೆ ಗ್ರಾಮದ ಸುತ್ತ ನದಿ ನೀರು ಆವರಿಸಿಕೊಂಡಿದ್ದು, ಗ್ರಾಮ ದ್ವೀಪದಂತಾಗಿ ಮಾರ್ಪಟ್ಟಿದೆ. ಕಿಕ್ರೆ ಗ್ರಾಮ ಹೊರ ಜಗತ್ತಿನ ಸಂಪರ್ಕವನ್ನೇ ಕಳೆದುಕೊಂಡಿದ್ದು, ಪ್ರವಾಹ ಭೀತಿ ಎದುರಾಗಿದೆ.
ಮತ್ತೊಂದೆಡೆ ಚಿಕ್ಕಮಗಳೂರಿನ ಬಾಳೆಹೊನ್ನೂರು ಸಮೀಪ ಮಣಬೂರಿನಲ್ಲಿ ಭೂಕುಸಿತವುಂಟಾಗಿದ್ದು, ಮಳೆ ಮುಂದುವರೆದರೆ ಇನ್ನಷ್ಟು ಭೂಕುಸಿತ ಸಂಭವಿಸುವ ಆತಂಕ ಎದುರಾಗಿದೆ.