ಬೆಂಗಳೂರು : ರಾಜ್ಯದ ಬಹುತೇಕ ಭಾಗಗಳಲ್ಲಿ ತೀವ್ರ ಮಳೆಯಾಗುತ್ತಿರುವುದರಿಂದ ಶಾಲೆಗಳಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಶಾಲಾ ಶಿಕ್ಷಣ ಇಲಾಖೆಯು ಮಾರ್ಗಸೂಚಿ ಹೊರಡಿಸಿದೆ.
2023-24ನೇ ಶೈಕ್ಷಣಿಕ ಸಾಲಿನ ಶಾಲೆಗಳನ್ನು ಪ್ರಾರಂಭಗೊಂಡು ನಡೆಯುತ್ತಿರುತ್ತದೆ. ರಾಜ್ಯದಲ್ಲಿ ಪ್ರಸ್ತುತ ಸತತವಾಗಿ ಮಳೆಯಾಗುತ್ತಿದ್ದು, ಅತೀವೃಷ್ಟಿ/ ನೆರೆ /ಪ್ರವಾಹ ಉಂಟಾಗಿರುತ್ತದೆ. ಇದರಿಂದಾಗಿ ರಾಜ್ಯದ ಸುಮಾರ ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಿಂದ ಶಾಲೆಗಳಿಗೆ ರಜೆಯನ್ನು ನೀಡಲಾಗುತ್ತಿರುವುದನ್ನು ಗಮನಿಸಲಾಗಿದೆ. ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಈ ಕೆಳಕಂಡ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲು ತಿಳಿಸಲಾಗಿದೆ.
ತೀವ್ರ ಮಳೆಯಿಂದಾಗಿ ಶಿಥಿಲಾವಸ್ಥೆಯಲ್ಲಿರುವ ಕೆಲವು ಶಾಲಾ ಕಟ್ಟಡಗಳು ಯಾವುದೇ ಸ೦ದರ್ಭದಲ್ಲಿ ಹಾನಿಗೊಳಗಾಗುವ / ಬಿದ್ದು ಹೋಗುವ ಸಂಭವವಿರುತ್ತದೆ. ಪ್ರಯುಕ್ತ, ಅಂತಹ ಶಾಲಾ ಕಟ್ಟಡಗಳನ್ನು, ತರಗತಿಯ ಕೊಠಡಿ, ಶೌಚಾಲಯಗಳನ್ನು ಬಳಸದೇ, ಸಮೀಪದ ಸುಸ್ಥಿತಿಯಲ್ಲಿರುವ ಕಟ್ಟಡ, ಕೊಠಡಿಗಳನ್ನು , ಶೌಚಾಲಯಗಳನ್ನು ಗುರುತಿಸಿ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವುದು ಹಾಗೂ ಮಕ್ಕಳು ಇಂತಹ ಕಟ್ಟಡ, ಕೊಠಡಿಗಳ ಮತ್ತು ಶೌಚಾಲಯಗಳ ಸಮೀಪದಲ್ಲಿ ಸುತ್ತಾಡದಂತೆ ಎಚ್ಚರಿಕೆ ಕ್ರಮ ವಹಿಸುವುದು. ಶಿಥಿಲಾವಸ್ಥೆಯಲ್ಲಿರುವ ಇಂತಹ ಕಟ್ಟಡಗಳ ತೀವ್ರತೆಯನ್ನು ಪರಿಗಣಿಸಿ ತೆರವುಗೊಳಿಸಲು ಅಥವಾ ನೆಲಸಮಗೊಳಿಸಲು ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳತಕ್ಕದ್ದು ಎಂದು ತಿಳಿಸಿದೆ.