ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಉಂಟಾದ ಪರಿಣಾಮ ರಾಜ್ಯದ ಹಲವು ಭಾಗದಲ್ಲಿ ಕಳೆದ ನಾಲ್ಕು ದಿನಗಳಿಂದ ಮಳೆ ಮುಂದುವರೆದಿದ್ದು, ಬೆಳೆಗಳು ಹಾನಿಯಾಗಿವೆ. ಮತ್ತೆ ಎರಡು ದಿನ ರಾಜ್ಯದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
10 ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಮುಂದಿನ 48 ಗಂಟೆಗಳ ಕಾಲ ರಾಜ್ಯದ ದಕ್ಷಿಣ ಒಳನಾಡು ಭಾಗದಲ್ಲಿ ಭಾರಿ ಮಳೆಯಾಗಲಿದೆ. ಕರಾವಳಿ ಜಿಲ್ಲೆಗಳಲ್ಲಿಯೂ ಹೆಚ್ಚಿನ ಮಳೆಯಾಗಲಿದೆ.
ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಹಾಸನ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಂದಿನಿಂದ 2 ದಿನ ಭಾರೀ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಅದೇ ರೀತಿ, ಬೆಂಗಳೂರು, ರಾಮನಗರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಮೈಸೂರು, ಮಂಡ್ಯ, ಬೆಂಗಳೂರು ಗ್ರಾಮಾಂತರ ಹಾಗೂ ಉತ್ತರ ಒಳನಾಡಿನ ಧಾರವಾಡ, ಹಾವೇರಿ, ಕೊಪ್ಪಳ, ಬಾಗಲಕೋಟೆ, ಬೆಳಗಾವಿ, ಗದಗ, ಹಾವೇರಿ ಜಿಲ್ಲೆಗಳಲ್ಲಿ ಸಾಧಾರಣ ಚದುರಿದ ಮಳೆಯಾಗಲಿದೆ.
ರಾಜ್ಯದ ಅನೇಕ ಪ್ರದೇಶದಲ್ಲಿ ಮೋಡ ಕವಿದ ವಾತಾವರಣವಿದ್ದು, ಚದುರಿದಂತೆ ಮಳೆಯಾಗಲಿದೆ. ರಾಜ್ಯದಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಅನೇಕ ಕಡೆ ಬೆಳೆಗಳಿಗೆ ಹಾನಿಯಾಗಿದೆ. ಕೊಯ್ಲು ಮಾಡಿದ ಫಸಲು ನೀರಿನಲ್ಲಿ ಕೊಚ್ಚಿ ಹೋಗಿದೆ. ಚಿಕ್ಕಮಗಳೂರು, ಶಿವಮೊಗ್ಗ ಮೊದಲಾದ ಕಡೆಗಳಲ್ಲಿ ಬೆಳೆಗಳು ಹಾನಿಯಾಗಿದ್ದು, ರೈತರು ಕಂಗಾಲಾಗಿದ್ದಾರೆ. ಕಾಫಿ ಹಣ್ಣುಗಳು ಉರುಳಿದ್ದು, ಕೊಯ್ಲು ಮಾಡಿದ ಭತ್ತ, ಹುಲ್ಲು ಹಾಳಾಗಿದೆ. ಅಡಿಕೆ ಒಣಗಿಸಲು ಮಳೆ ಅಡ್ಡಿಯಾಗಿದೆ. ಹುಬ್ಬಳ್ಳಿ ಸೇರಿ ಅನೇಕ ಕಡೆ ಭಾರೀ ಮಳೆಯಾಗಿ ರಸ್ತೆಗಳು ಜಲಾವೃತಗೊಂಡು ಮನೆಗಳಿಗೆ ನೀರು ನುಗ್ಗಿದೆ.