ಬೆಂಗಳೂರು: ರಾಜ್ಯದ ಹಲವೆಡೆ ಮುಂಗಾರು ಮಳೆ ಆರ್ಭಟ ಜೋರಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಭಾರೀ ಮಳೆಯಿಂದಾಗಿ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿದ್ದು, ಅನೇಕ ಸೇತುವೆ ಮುಳುಗಡೆಯಾಗಿವೆ. ಗ್ರಾಮಗಳು ಜಲಾವೃತಗೊಂಡಿವೆ.
ಬೆಳಗಾವಿ ತಾಲೂಕಿನ ಗ್ರಾಮದ ಕಾಕತಿ ಗ್ರಾಮದ ಬಳಿ ಮಾರ್ಕಂಡೇಯ ನದಿಯಲ್ಲಿ ರೈತರೊಬ್ಬರು ಕೊಚ್ಚಿಹೋದ ಘಟನೆ ನಡೆದಿದೆ. ಜಮೀನಿನಲ್ಲಿ ಕೆಲಸಮಾಡುತ್ತಿದ್ದಾಗ ನೀರು ನುಗ್ಗಿ ಅವಘಡ ಸಂಭವಿಸಿದೆ. ಸಿದ್ದರಾಮ ಸುತಗಟ್ಟಿ ಎಂಬ ರೈತ ನದಿ ನೀರು ನುಗ್ಗಿದ್ದರಿಂದ ಕೊಚ್ಚಿ ಹೋಗಿದ್ದಾರೆ ಎನ್ನಲಾಗಿದ್ದು, ಹುಡುಕಾಟ ನಡೆಸಲಾಗಿದೆ.
ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಮಾಚಕನೂರು ಗ್ರಾಮದ ಹೊಳೆ ಬಸವೇಶ್ವರ ದೇವಾಲಯ ಮತ್ತಷ್ಟು ಮುಳುಗಡೆಯಾಗಿದೆ. ಹೊಳೆ ಬಸವೇಶ್ವರ ದೇವಾಲಯ 10 ಅಡಿಯಷ್ಟು ಮುಳುಗಡೆಯಾಗಿದೆ.
ಘಟಪ್ರಭಾ ನದಿಯಲ್ಲಿ ನೀರಿನ ಹರಿವು ಮತ್ತಷ್ಟು ಹೆಚ್ಚಳವಾಗಿದ್ದು, ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನಲ್ಲಿ ಪ್ರವಾಹ ಭೀತಿ ಎದುರಾಗಿದೆ. ಮಿರ್ಜಿ ಸೇತುವೆ ಸಂಪೂರ್ಣ ಮುಳುಗಡೆಯಾಗಿದ್ದು, ಸೇತುವೆಯ ಬಳಿ ನೂರಾರು ಎಕರೆಯಲ್ಲಿ ಕಬ್ಬು ಜಲಾವೃತಗೊಂಡಿದೆ. ಮಿರ್ಜಿ ಗ್ರಾಮದ ಸುತ್ತಲೂ ನದಿ ನೀರು ಆವರಿಸುತ್ತಿದ್ದು, ಗ್ರಾಮ ಜಲಾವೃತವಾಗುವ ಆತಂಕದಲ್ಲಿ ಜನರಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿದ್ದರೂ ಪ್ರವಾಹ ತಗ್ಗಿಲ್ಲ. ನದಿಪಾತ್ರದ ಜನರಿಗೆ ಪ್ರವಾಹ ಭೀತಿ ಎದುರಾಗಿದೆ. ಹಿರಣ್ಯಕೇಶಿ, ಮಲಪ್ರಭಾ, ಘಟಪ್ರಭಾ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಮೂಡಲಗಿ ತಾಲೂಕಿನ 6 ಸೇತುವೆಗಳು ಮುಳುಗಡೆಯಾಗಿವೆ. ಚಿಕ್ಕೋಡಿ ತಾಲೂಕಿನ 7 ಸೇತುವೆಗಳು ಜಲಾವೃತಗೊಂಡಿವೆ. ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಕಬ್ಬಿನ ಗದ್ದೆ ಜಲಾವೃತಗೊಂಡಿವೆ.
ಮಲಪ್ರಭಾ ನದಿ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ. ನವಿಲು ತೀರ್ಥ ಡ್ಯಾಮ್ ನಿಂದ ನೀರು ಬಿಟ್ಟರೆ ಮತ್ತಷ್ಟು ಅಪಾಯವಾಗಲಿದೆ. ಗದಗ ಜಿಲ್ಲೆ ನರಗುಂದ ತಾಲೂಕಿನ ಲಕಮಾಪುರ ಗ್ರಾಮ ನಡುಗಡ್ಡೆಯಾಗುವ ಆತಂಕ ಎದುರಾಗಿದೆ. ಬೆಳ್ಳೇರಿ ಗ್ರಾಮದ ಪರಿಹಾರ ಕೇಂದ್ರಕ್ಕೆ ತೆರಳುವಂತೆ ಲಕಮಾಪುರ ಗ್ರಾಮಸ್ಥರಿಗೆ ನರಗುಂದ ತಹಶೀಲ್ದಾರ್ ಮನವಿ ಮಾಡಿದ್ದಾರೆ.