ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರಿ ಮಳೆಯಾಗುತ್ತಿದ್ದು, ಇನ್ನೂ ಐದು ದಿನಗಳ ಕಾಲ ಭಾರಿ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರಾವಳಿ ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಮಳೆಯಾಗಲಿದೆ ಎಂದು ತಿಳಿಸಲಾಗಿದ್ದು, ಒಳನಾಡು ಪ್ರದೇಶದಲ್ಲೂ ಗುಡುಗು ಸಹಿತ ಮಳೆ ಸುರಿಯಲಿದೆ ಎಂದು ಹೇಳಲಾಗಿದೆ. ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಭಾರಿ ಮಳೆ ಸುರಿಯುವ ಸಾಧ್ಯತೆ ಇರುವುದರಿಂದ ಯಲ್ಲೋ ಅಲರ್ಟ್ ಘೋಷಿಸಲಾಗಿದೆ.
ಬಿರು ಬಿಸಿಲಿನಿಂದ ಕಂಗೆಟ್ಟಿದ್ದ ರಾಜ್ಯದ ಜನರಿಗೆ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆ ತಂಪೆರೆದಿದೆ. ಕೆರೆಕಟ್ಟೆಗಳು ಹಳ್ಳ ಕೊಳ್ಳಗಳಲ್ಲಿ ನಿಧಾನವಾಗಿ ನೀರು ಸಂಗ್ರಹವಾಗುತ್ತಿದ್ದು, ಬಿಸಿಲಿನ ಹೊಡೆತಕ್ಕೆ ಬಿರುಕು ಬಿಟ್ಟಿದ್ದ ಭೂಮಿ ತಂಪಾಗತೊಡಗಿದೆ. ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆ ಆಗಲಿದೆ ಎಂಬ ನಿರೀಕ್ಷೆ ಇರುವ ಹಿನ್ನೆಲೆಯಲ್ಲಿ ರೈತಾಪಿ ವರ್ಗ ಸಂತಸದಲ್ಲಿದೆ.