ಬೆಂಗಳೂರು: ರಾಜ್ಯದ ಕರಾವಳಿ ಭಾಗದಲ್ಲಿ ಮುಂಗಾರು ಚುರುಕುಗೊಂಡಿದ್ದು, ಕರಾವಳಿಯ ಮೂರು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ.
ಇಂದಿನಿಂದ ಜುಲೈ 8ರವರೆಗೆ ಕರಾವಳಿ ಕರ್ನಾಟಕದಲ್ಲಿ ವರುಣಾರ್ಭಟ ಜೋರಾಗಲಿದ್ದು, ಬಿರುಗಾಳಿ ಸಹಿತ ಭಾರಿ ಮಳೆಯಾಗಲಿದೆ. ಗಂಟೆಗೆ 45-55 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಲಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ. ಮಳೆ ಅಬ್ಬರಕ್ಕೆ ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಅವಾಂತರಗಳು ಸೃಷ್ಟಿಯಾಗಿದ್ದು, ಹೊನ್ನಾವರದಲ್ಲಿ ಬಿರುಗಾಳಿಯಿಂದ ಮನೆ ಮೇಲೆ ಬೃಹತ್ ಮರ ಬಿದ್ದಿದೆ. ಮಣಿಪಾಲದ ಮುಖ್ಯರಸ್ತೆ ಬಳಿ ಮಳೆ ಅವಾಂತರಕ್ಕೆ ಗುಡ್ಡ ಕುಸಿದಿದೆ. ಬೆಟ್ಟದ ಮೇಲೆ ಕಟ್ಟಡಗಳಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ.
ಕೊಟ್ಟಾರ ಚೌಕಿ ಜಂಕ್ಷನ್, ಪಂಪವೆಲ್ ವೃತ್ತ ಸಂಪೂರ್ಣ ಜಲಾವೃತಗೊಂಡಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ದಕ್ಷಿಣ ಕನ್ನಡ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.