ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ಹಲವು ಕಡೆ ಧಾರಾಕಾರ ಮಳೆಯಾಗುತ್ತಿದ್ದು, ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.ಶೃಂಗೇರಿ, ಕೊಪ್ಪ,ಕಳಸ, ಮೂಡಿಗೆರೆ, ಎನ್ ಆರ್ ಪುರದಲ್ಲಿ ಭಾರಿ ಮಳೆಯಾಗುತ್ತಿದ್ದು, ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.
ತುಂಗಾ, ಭದ್ರಾ ನದಿಗಳ ಒಳ ಹರಿವಿನಲ್ಲಿ ಬಾರಿ ಹೆಚ್ಚಳವಾಗಿ ಜನ ಸಂಚಾರ ಅಸ್ತವ್ಯಸ್ತವಾಗಿದೆ. ಹಲವು ಕಡೆ ಗುಡ್ಡ ಕುಸಿದಿದೆ. ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯದ ಹಲವಡೆ ಮಳೆಯ ಅಬ್ಬರ ಮುಂದುವರೆದಿದ್ದು, 9 ಜಿಲ್ಲೆಗಳಲ್ಲಿ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಜನಜೀವನ ಅಸ್ಥವ್ಯಸ್ತಗೊಂಡಿದೆ.
ರಾಜ್ಯಾದ್ಯಂತ ಇನ್ನೂ ನಾಲ್ಕು ದಿನಗಳ ಕಾಲ ಭಾರಿ ಮಳೆ ಮುಂದುವರೆಯಲಿದೆ. 9 ಜಿಲ್ಲೆಗಳಲ್ಲಿ ಭಾರಿ ಮಳೆ ಆಗುವ ಸಾಧ್ಯತೆ ಹಿನ್ನೆಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.ನೈರುತ್ಯ ಮುಂಗಾರು ರಾಜ್ಯದ ಬಹುತೇಕ ಭಾಗದಲ್ಲಿ ಅಬ್ಬರಿಸುತ್ತಿದೆ. ರಾಜ್ಯದಾದ್ಯಂತ ಮುಂದಿನ ನಾಲ್ಕು ದಿನ ಭಾರಿ ಮಳೆ ಆಗುವ ಸಂಭವ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಜುಲೈ 26ರಂದು ಬೀದರ್, ಕಲಬುರಗಿ, ಉಡುಪಿ, ಬೆಳಗಾವಿ, ದಕ್ಷಿಣ ಕನ್ನಡ, ಶಿವಮೊಗ್ಗ, ಕೊಡಗು, ಉತ್ತರ ಕನ್ನಡ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಕೊಪ್ಪಳ, ಬಳ್ಳಾರಿ, ಚಿತ್ರದುರ್ಗ, ಹಾಸನ, ಯಾದಗಿರಿ, ರಾಯಚೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.