ಬಳ್ಳಾರಿ: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತಿದ್ದು, ಜಲಾಶಯಗಳು ಭರ್ತಿಯಾಗಿವೆ. ಹಲವು ಜಲಾಶಯಗಳಿಂದ ಹೆಚ್ಚಿನ ಪ್ರಮಾಣದ ನೀರು ಹೊರಬಿಡಲಾಗುತ್ತಿದ್ದು, ಸುತ್ತಮುತ್ತಲಿನ ಪ್ರದೇಶಗಳು ಜಲಾವೃತಗೊಂಡಿವೆ.
ಬಳ್ಳಾರಿಯ ತುಂಗಭದ್ರಾ ಡ್ಯಾಂ ನಿಂದ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಲಾಗಿದ್ದು, ಪರಿಣಾಮ ವಿಜಯನಗರ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಪ್ರವಾಹ ಭೀತಿ ಉಂಟಾಗಿದೆ. ಹೊಸಪೇಟೆ ತಾಲೂಕಿನ ಹಂಪಿಯ ಪುರಂದರ ಮಂಟಪ, ಸ್ನಾನಘಟ್ಟ ಮುಳುಗಡೆಯಾಗಿದೆ.
ತುಂಗಭದ್ರಾ ಪ್ರವಾಹದಿಂದಾಗಿ ರಾಮ, ಲಕ್ಷ್ಮಣ, ಯಂತ್ರೋದ್ಧರ ದೇವಸ್ಥಾನಕ್ಕೆ ಸಂಪರ್ಕ ಕಡಿತಗೊಂಡಿದ್ದು, ಸುತ್ತಮುತ್ತಲ ಪ್ರದೇಶಗಳು ನೀರಿನಲ್ಲಿ ಮುಳುಗಿವೆ. ನದಿ ಪಾತ್ರದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದ್ದು, ಪ್ರವಾಸಿ ತಾಣಗಳಿಗೆ ತೆರಳದಂತೆ ಪ್ರವಾಸಿಗರಿಗೆ ಸೂಚಿಸಲಾಗಿದೆ.