ವರುಣಾರ್ಭಟ ಕ್ಷಣ ಮಾತ್ರದಲ್ಲೇ ಏನೆಲ್ಲ ಅನಾಹುತವನ್ನು ತಂದೊಡ್ಡಬಹುದು ಎಂಬುದು ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಮಳೆ ಅವಾಂತರಗಳೇ ಸಾಕ್ಷಿ. ಮುಂಗಾರು ಮಳೆಯೊಂದಿಗೆ ಜೀವಕಳೆ ಪಡೆದುಕೊಳ್ಳುತ್ತಿರುವ ಭೂರಮೆ, ಜಲಪಾತಗಳು ನೋಡ ನೋಡುತ್ತಿದ್ದಂತೆ ರೌದ್ರಾವತಾರ ತಾಳಿ ಕಣ್ಮುಂದೆಯೇ ಎಲ್ಲವನ್ನು ಆಪೋಶನ ತೆಗೆದುಕೊಳ್ಳುವಷ್ಟು ಭಯಂಕರ ರೂಪತಾಳುತ್ತದೆ.
ಮಳೆಗಾಲದ ಸಂದರ್ಭದಲ್ಲಿ ಝರಿ, ಜಲಪಾತಗಳ ಸೌಂದರ್ಯವನ್ನು ವೀಕ್ಷಿಸಲು ಹೋದರೆ ಎಂಥಹ ಅಪಾಯಕ್ಕೆ ಸಿಲುಕಿಕೊಳ್ಳುತ್ತೇವೆ ಎಂಬುದಕ್ಕೆ ಕೆಲ ದಿನಗಳ ಹಿಂದೆ ಮಹಾರಾಷ್ಟ್ರದ ಪುಣೆ ಬಳಿಯ ಲೋನಾವಾಲದಲ್ಲಿ ನಡೆದ ದುರಂತವೇ ಸಾಕ್ಷಿ. ಎಲ್ಲೋ ಸಣ್ಣದಾಗಿ ಜುಳು ಜುಳು ಹರಿಯುವ ಜಲಧಾರೆ ಇನ್ನೆಲ್ಲೋ ಸುರಿದ ಮಳೆಯ ಅಬ್ಬರಕ್ಕೆ ಏಕಾಏಕಿ ಧುಮ್ಮಿಕ್ಕಿ ಹರಿದು ರೌದ್ರಾವತಾರ ಪಡೆದುಕೊಳ್ಳುತ್ತದೆ. ನಯನ ಮನೋಹರವಾಗಿ ಹರಿಯುತ್ತಿದ್ದ ಜಲಪಾತ ರುದ್ರ ಭಯಂಕರವಾಗಿ ಭೋರ್ಗರೆದು ಉಕ್ಕತೊಡಗುತ್ತದೆ….. ಎದೆ ಝಲ್ ಎನ್ನಿಸುವ ಇಂಥದ್ದೊಂದು ಕ್ಷಣಗಳ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸಣ್ಣ ಜಲಪಾತವೊಂದರ ಮೇಲ್ಭಾಗದಲ್ಲಿ ರಭಸದಿಂದ ಹರಿಯುತ್ತಿದ್ದ ಜಲರಾಶಿ ನೋಡ ನೋಡುತ್ತಿದ್ದಂತೆ ಎಲ್ಲವನ್ನು ನುಂಗುತ್ತಾ ಅಪ್ಪಳಿಸಿದ್ದು, ಶಾಂತವಾಗಿ ಹರಿಯುತ್ತಿದ್ದ ಸಣ್ಣ ಝರಿ ಯಾವ ಸೂಚನೆಯೂ ಇಲ್ಲದೇ ಇದ್ದಕ್ಕಿದ್ದಂತೆ ಭೋರ್ಗರೆಯಲಾರಂಭಿಸಿದೆ. ಮಳೆ ಅಬ್ಬರದ ನಡುವೆ ಜಲಪಾತದ ರುದ್ರ ರೂಪಾಂತರ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಎದೆ ನಡುಗಿಸುವಂತಿದೆ. ಮಳೆಗಾಲದ ಹೊತ್ತಲ್ಲಿ ಜಲಪಾತಗಳಿಗೆ ಭೇಟಿ ನೀಡಲು ಹೋದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದಕ್ಕೆ ಈ ದೃಶ್ಯ ಸ್ಪಷ್ಟ ನಿದರ್ಶನ.