ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಿದ್ದು, ಆರು ಜನ ಸಾವನ್ನಪ್ಪಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾನುವಾರ ಗುಡುಗು ಸಹಿತ ಭಾರಿ ಮಳೆಯಾಗಿದೆ.
ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಮೈಸೂರು, ಕೊಡಗು, ಧಾರವಾಡ, ರಾಮನಗರ, ಕೊಪ್ಪಳ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದೆ.
ಕೆಲವು ಕಡೆಗಳಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದ್ದು, ರಸ್ತೆಗಳ ಮೇಲೆ ಮರಗಳು, ವಿದ್ಯುತ್ ಕಂಬಗಳು ಉರುಳಿ ಬಿದ್ದು ಹಾನಿಯಾಗಿದೆ.
ಬೆಂಗಳೂರಿನಲ್ಲಿ ನೀರು ತುಂಬಿಕೊಂಡಿದ್ದ ಅಂಡರ್ ಪಾಸ್ ಮೂಲಕ ದಾಟಿಸಲು ಯತ್ನಿಸಿದ ಇನ್ಫೋಸಿಸ್ ಉದ್ಯೋಗಿ ಭಾನುರೇಖಾ(23) ಮೃತಪಟ್ಟಿದ್ದಾರೆ.
ಪರಿಯಾಪಟ್ಟಣ ತಾಲ್ಲೂಕಿನ ಆವರ್ತಿಯ ಲೋಕೇಶ್(55) ಜಮೀನಿನಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯಲ್ಲಿ ಬೈಕ್ ಮೇಲೆ ಮರ ಬಿದ್ದು ಸವಾರ ವೇಣುಗೋಪಾಲ್(55) ಮೃತಪಟ್ಟಿದ್ದಾರೆ.
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಡಿ. ಸಿದ್ದಾಪುರದಲ್ಲಿ ಸಿಡಿಲು ಬಡಿದು ಅಪ್ಪೇನಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಮಲ್ಲಿಕಾರ್ಜುನ(39) ಸಾವನ್ನಪ್ಪಿದ್ದಾರೆ. ಬೆಟ್ಟದಪುರ ಸಮೀಪದ ಬಾರಸೆ ಗ್ರಾಮದ ಜಮೀನಿನಲ್ಲಿ ವಿದ್ಯುತ್ ತಂತಿ ತುಳಿದು ಕೆ. ದೊಡ್ಡಕೊಪ್ಪಲಿನ ಸ್ವಾಮಿ(18) ಮೃತಪಟ್ಟಿದ್ದಾರೆ. ಕೊಪ್ಪಳ ತಾಲೂಕಿನ ಶಿವಪುರದಲ್ಲಿ ಶ್ರೀಕಾಂತ ಮೇಟಿ(16) ಸಿಡಿಲು ಬಡಿದು ಸಾವನ್ನಪ್ಪಿದ್ದಾನೆ. ಭಾರಿ ಮಳೆಯಿಂದಾಗಿ ಹಲವು ಕಡೆ ಅನಾಹುತ ಉಂಟಾಗಿದೆ.