ದಾವಣಗೆರೆ: ದಾವಣಗೆರೆ ಜಿಲ್ಲೆಯಾದ್ಯಂತ ಭಾರಿ ಮಳೆಯಿಂದಾಗಿ ಅವಾಂತರ ಸೃಷ್ಟಿಯಾಗಿದೆ. ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಹಲವೆಡೆ ರಸ್ತೆಗಳು ಜಲಾವೃತಗೊಂಡಿವೆ. ಸರ್ಕಾರಿ ಆಸ್ಪತ್ರೆಗಳಿಗೆ ನೀರು ನಿಗ್ಗಿದ್ದು, ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ ರಸ್ತೆಗಳು ನದಿಯಂತಾಗಿದ್ದು, ಹೊನ್ನಾಳಿ ಸರ್ಕಾರಿ ಆಸ್ಪತ್ರೆಗೆ ನೀರು ನುಗ್ಗಿದೆ. ರಾತ್ರಿಯಿಡಿ ರೋಗಿಗಳು ಪರದಾಡಿದ್ದಾರೆ. ಶಸ್ತ್ರ ಚಿಕಿತ್ಸಾ ಕೊಠಡಿ, ಔಷಧ ವಿತರಣಾ ಕೊಠಡಿ, ಹೆರಿಗೆ ವಾರ್ಡ್, ಐಸಿಯು ಘಟಕಗಳು ನೀರಿನಿಂದ ತುಂಬಿವೆ. ಆಸ್ಪತ್ರೆಯ ತುಂಬೆಲ್ಲಾ ನೀರು ನಿಂತಿದ್ದು, ನೀರಿನಲ್ಲಿಯೇ ಸಿಬ್ಬಂದಿಗಳು ಓಡಾಡುತ್ತಿದ್ದಾರೆ.
ಆಸ್ಪತ್ರೆಗೆ ನೀರು ನುಗ್ಗಿದ್ದರಿಂದ ರೋಗಿಗಳನ್ನು ಬೇರೆಡೆ ಸ್ಥಳಾಂತರಿಸಲಾಗಿದೆ. ಭಾರಿ ಮಳೆಯಿಂದಾಗಿ ಹೊನ್ನಾಳಿಯ ಹಲವು ಬಡಾವಣೆಗಳು, ಬಸ್ ನಿಲ್ದಾಣ ಕೂಡ ಜಲಾವೃತಗೊಂಡಿದೆ.
ಇನ್ನು ನ್ಯಾಮತಿಯಲ್ಲಿ ಸುರಿದ ವರುಣಾರ್ಭಟಕ್ಕೆ ಎಮ್ಮೆಯೊಂದು ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿದೆ. ಆರುಂಡಿ ಗ್ರಾಮದ ರೈತ ಮುಳುಗಪ್ಪ ಮಲ್ಲೇಶಪ್ಪ ಎಂಬುವವರಿಗೆ ಸೇರಿದ ಎಮ್ಮೆ ನೀರುಪಾಲಾಗಿದೆ. ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.