ಬೆಂಗಳೂರು: ದಸರಾ ಹಬ್ಬದ ಸಂಭ್ರಮದ ನಡುವೆ ರಾಜ್ಯದ ಬಹುತೇಕ ಭಾಗದಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಉತ್ತರ ಕರ್ನಾಟಕದಲ್ಲಿ ಭಾರಿ ಮಳೆಯಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಗದಗ, ಧಾರವಾಡ ಜಿಲ್ಲೆಯಲ್ಲಿ ಭಾರಿ ಮಳೆಯಾಗಿದ್ದು, ಬೆಣ್ಣೆ ಹಳ್ಳ ಮತ್ತು ಮಲಪ್ರಭಾ ನದಿಯಲ್ಲಿ ಪ್ರವಾಹ ಉಂಟಾಗಿದೆ. ಇದರಿಂದಾಗಿ ಕೊಯ್ಲು ಹಂತಕ್ಕೆ ಬಂದಿದ್ದ ಸಾವಿರಾರು ಹೆಕ್ಟೇರ್ ಪ್ರದೇಶದ ಮೆಕ್ಕೆಜೋಳ ಜೋಳ ಸೇರಿ ವಿವಿಧ ಬೆಳೆಗಳು ಹಾನಿಯಾಗಿವೆ.
ಹಾವೇರಿ ತಾಲೂಕಿನ ಕನಕಪುರ ಸಮೀಪ ಯುಟಿಪಿ ಕಾಲುವೆ ಒಡೆದು ಸಾವಿರಾರು ಎಕರೆ ಪ್ರದೇಶದಲ್ಲಿನ ಬೆಳೆ ಹಾನಿಯಾಗಿದೆ. ಕೊಪ್ಪಳ ತಾಲೂಕಿನ ಹಿರೇಹಳ್ಳ ಜಲಾಶಯ ಭರ್ತಿಯಾಗಿ ಜಲಾಶಯದಿಂದ ಸುಮಾರು 19000 ಕ್ಯುಸೆಕ್ ನಷ್ಟು ನೀರು ಹರಿಬಿಡಲಾಗಿದ್ದು, ಹಳ್ಳದುದ್ದಕ್ಕೂ ಪ್ರವಾಹ ಉಂಟಾಗಿ ಅಕ್ಕಪಕ್ಕದ ಹೊಲಗಳಿಗೆ ನೀರು ನುಗ್ಗಿದೆ. ಹುಲಿಗಿ- ಆನೆಗೊಂದಿ ಮಾರ್ಗ ಬಂದ್ ಆಗಿದ್ದರಿಂದ ಭಕ್ತರು ಪರದಾಡುವಂತಾಗಿತ್ತು.
ಚಾಮರಾಜನಗರ ತಾಲೂಕಿನ ಬಾಗಳಿಯಲ್ಲಿ ಮಳೆಗೆ ಮನೆ ಗೋಡೆ ಕುಸಿದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.