ದೇಶದಾದ್ಯಂತ ಭಾರಿ ಮಳೆಯಾಗುತ್ತಿದ್ದು, ಹಲವು ರಾಜ್ಯಗಳಲ್ಲಿ ವರುಣಾರ್ಭಟಕ್ಕೆ ಜನ ಜೀವನ ತತ್ತರಗೊಂಡಿದೆ. ನದಿಗಳು ಅಬ್ಬರಿಸಿ ಹರಿಯುತ್ತಿದ್ದು, ಪ್ರವಾಹ ಸೃಷ್ಟಿಯಾಗಿದೆ. ಭೂ ಕುಸಿತದಿಂದಾಗಿ ಅನಾಹುತಗಳು ಸಂಭವಿಸುತ್ತಿವೆ. ಈ ನಡುವೆ ಈ ತಿಂಗಳು ಹಾಗೂ ಸೆಪ್ಟೆಂಬರ್ ನಲ್ಲಿ ಮಳೆಯ ಅಬ್ಬರ ಇನ್ನಷ್ಟು ಹೆಚ್ಚಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಭಾರಿ ಮಳೆಯಿಂದಾಗಿ ಈಗಾಗಲೇ ಕರ್ನಾಟಕ, ಕೇರಳ, ಹಿಮಾಚಲ ಪ್ರದೇಶ, ಉತ್ತರಾಖಂಡ, ದೆಹಲಿಯಲ್ಲಿ ಸಾವು-ನೋವುಗಳು ಸಂಭವಿಸುತ್ತಿವೆ. ಸಾಲು ಸಾಲು ಅನಾಹುತಗಳು ನಡೆಯುತ್ತಿವೆ. ಜಲಪ್ರಳಯದ ಭೀತಿ ಎದುರಾಗುತ್ತಿದೆ. ಈ ಮಧ್ಯೆ ಹವಾಮಾನ ಇಲಾಖೆ ನೀಡಿರುವ ಮಾಹಿತಿ ಸದ್ಯಕ್ಕೆ ಮಳೆ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಇನ್ನಷ್ಟು ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡಿದೆ.
ಆಗಸ್ಟ್ ಹಾಗೂ ಸೆಪ್ಟೆಂಬರ್ ನಲ್ಲಿ ಭಾರತದಲ್ಲಿ ಅತಿಹೆಚ್ಚು ಮಳೆಯಾಗಲಿದೆ. ದೇಶಾದ್ಯಂತ ದೀರ್ಘಾವಧಿಯ ಸರಾಸರಿಗಿಂತ ಹೆಚ್ಚು ಮಳೆಯಾಗಲಿದೆ. ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಸರಾಸರಿಗಿಂತ ಹೆಚ್ಚು ಮಳೆಯಾಗಲಿದೆ. ಜೂನ್ 1ರಿಂದ ದೇಶದಲ್ಲಿ 453.8 ಮಿ.ಮೀಮಳೆಯಾಗಿದೆ. ಸಾಮಾನ್ಯ ಮಳೆ 445.8 ಮಿ.ಮೀ ಆಗಿದೆ. ಇದು ವಾಡಿಕೆ ಮಳೆಗಿಂತ ಶೆ.2ರಷ್ಟು ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ದೇಶದಲ್ಲಿ ಇನ್ನಷ್ಟು ಮಳೆ ಸಂಭವವಿದೆ ಎಂದು ತಿಳಿಸಿದೆ.