ಬೇಸಿಗೆಯ ಬಿಸಿ ಜನಸಾಮಾನ್ಯರಿಗೆ ಜೋರಾಗಿಯೇ ತಟ್ಟಿದೆ. ಧಗೆ ವಿಪರೀತವಾಗಿದ್ದಾಗ ಆರೋಗ್ಯಕ್ಕೂ ಅಪಾಯ ಸಹಜ. ಬಿಸಿ ಗಾಳಿ ಸೇರಿದಂತೆ ಅನೇಕ ರೀತಿಯ ಹವಾಮಾನ ಬದಲಾವಣೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಬಹುದು.
ಹಾಗಾಗಿ ಬೇಸಿಗೆ ಮುಗಿಯುವವರೆಗೂ ಆರೋಗ್ಯದ ಬಗ್ಗೆ ನೀವು ವಿಶೇಷ ಕಾಳಜಿ ವಹಿಸಬೇಕು. ಬಾಯಾರಿಕೆ ಆಗದೇ ಇದ್ದರೂ ಜಾಸ್ತಿ ನೀರು ಕುಡಿಯಿರಿ. ಹಣ್ಣು ಮತ್ತು ತರಕಾರಿಯನ್ನು ಹೆಚ್ಚಾಗಿ ಸೇವಿಸಿ. ಕಲ್ಲಂಗಡಿ, ಸೌತೆಕಾಯಿ, ಸೊಪ್ಪು, ಮೂಲಂಗಿ ಇವುಗಳ ಸೇವನೆ ಉತ್ತಮ. ಯಾಕಂದ್ರೆ ಇದರಲ್ಲಿ ನೀರಿನ ಪ್ರಮಾಣ ಶೇ.95 ರಷ್ಟಿರುತ್ತದೆ.
ಡಿಹೈಡ್ರೇಶನ್ ಗೆ ಕಾರಣವಾಗುವ ಮದ್ಯ ಮತ್ತು ಕೆಫಿನ್ ನ ಅತಿಯಾದ ಸೇವನೆ ಬೇಡ. ಹತ್ತಿಯಿಂದ ಮಾಡಿದ ತೆಳುವಾದ, ಸಡಿಲ ಬಟ್ಟೆಗಳನ್ನೇ ಧರಿಸಿ. ಹೊರಗಡೆ ಹೊರಟಾಗ ಮರೆಯದೇ ಬ್ಯಾಗಿನಲ್ಲಿ ನೀರಿನ ಬಾಟಲಿ ತೆಗೆದುಕೊಂಡು ಹೋಗಿ. ನಿಮ್ಮ ಹೊರಗಿನ ಓಡಾಟದ ಸಮಯ ನಿಗದಿಪಡಿಸಿಕೊಳ್ಳಿ. ಅತಿಯಾದ ಬಿಸಿಲು ಇರುವ ವೇಳೆ ಓಡಾಟ ಬೇಡ. ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಬಿಸಿಲಲ್ಲಿ ಓಡಾಡದೇ ಇರುವುದು ಒಳಿತು.
ಬೇಸಿಗೆಯಲ್ಲಿ ತಣ್ಣೀರು ಸ್ನಾನ ಮಾಡಿ. ಹೊರಗೆ ಬಿಸಿಲು ಜೋರಾಗಿದ್ದಾಗ ಮನೆಯ ಕಿಟಕಿ ಬಾಗಿಲುಗಳಿಗೆ ಪರದೆ ಹಾಕಿ. ಹಾಗೆ ಮಾಡಿದರೆ ಮನೆ ಸ್ವಲ್ಪ ತಣ್ಣಗಿರುತ್ತದೆ. ಬಿಸಿಲು ಜೋರಾಗಿದ್ದಾಗ ಅತಿಯಾದ ದೈಹಿಕ ಚಟುವಟಿಕೆ ಬೇಡ. ಅನಾರೋಗ್ಯ ಕಾಣಿಸಿಕೊಂಡಲ್ಲಿ ತಕ್ಷಣವೇ ವೈದ್ಯರನ್ನು ಭೇಟಿ ಮಾಡಿ. ಹವಾಮಾನ ಮುನ್ಸೂಚನೆಗಳ ಬಗ್ಗೆ ಗಮನವಿರಲಿ.
ಬೇಸಿಗೆಯಲ್ಲಿ ಆರೋಗ್ಯ ಕಾಳಜಿ ಬಗ್ಗೆ ನಿಮ್ಮ ಸ್ನೇಹಿತರು, ಸಂಬಂಧಿಕರಿಗೆ ತಿಳಿಹೇಳಲು ಮರೆಯಬೇಡಿ. ಯಾಕಂದ್ರೆ ಬಿಸಿ ಗಾಳಿಯಿಂದ ಮಕ್ಕಳು, ವೃದ್ಧರಿಗೆ ಅಪಾಯ ಹೆಚ್ಚು. ಅದರಲ್ಲೂ ಉಸಿರಾಟದ ಸಮಸ್ಯೆ ಇರುವವರಿಗೆ ಇದರಿಂದ ಬಹು ಬೇಗ ದುಷ್ಪರಿಣಾಮ ಉಂಟಾಗುತ್ತದೆ.