ಬೆಂಗಳೂರು: ರಾಜ್ಯದ ಬಹುತೇಕ ಭಾಗದಲ್ಲಿ ತಾಪಮಾನ ದಿಢೀರ್ ಹೆಚ್ಚಳವಾಗಿದೆ. ರಾಜ್ಯ ಮಾತ್ರವಲ್ಲ, ಆಂಧ್ರಪ್ರದೇಶ, ಕೇರಳ, ತೆಲಂಗಾಣ, ಗೋವಾ, ತಮಿಳುನಾಡು, ಪಶ್ಚಿಮ ಬಂಗಾಳ ಮೊದಲಾದ ರಾಜ್ಯಗಳಲ್ಲಿ ತಾಪಮಾನ ದಿಢೀರ್ ಹೆಚ್ಚಳವಾಗಿದೆ.
ಮುಂದಿನ ಐದು ದಿನಗಳ ಕಾಲ ಅನೇಕ ರಾಜ್ಯಗಳಲ್ಲಿ ತಾಪಮಾನ ಏರಿಕೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ರಾಜ್ಯದಲ್ಲಿ ಉಷ್ಣಾಂಶದಲ್ಲಿ ಭಾರಿ ಏರಿಕೆಯಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಗರಿಷ್ಠ ತಾಪಮಾನ 42 ಡಿಗ್ರಿ ಸೆಲ್ಸಿಯಸ್ ದಾಟಿದ್ದು, ಬಿರು ಬಿಸಿಲ ಹೊಡೆತಕ್ಕೆ ಜನ ತತ್ತರಿಸಿ ಹೋಗಿದ್ದಾರೆ.
ವಿಜಯನಗರ, ಬಳ್ಳಾರಿ ಹೊರತುಪಡಿಸಿ ಹಲವು ಜಿಲ್ಲೆಗಳಲ್ಲಿ ಗಾಳಿಯಲ್ಲಿರುವ ಆವಿಯ ಪ್ರಮಾಣ ಶೇಕಡ 90ಕ್ಕಿಂತ ಕೆಳಗಿದೆ. ಅರ್ದ್ರತೆ ಕಡಿಮೆಯಾಗಿದ್ದು, ಯಾದಗಿರಿಯಲ್ಲಿ ಗರಿಷ್ಠ ಉಷ್ಣಾಂಶ 42.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಮುಂದಿನ ಮೂರು ದಿನ ವಾತಾವರಣದಲ್ಲಿ ಗರಿಷ್ಠ ಉಷ್ಣಾಂಶ ಇರುತ್ತದೆ. ಜನ, ರೈತರು ಬೆಳಗ್ಗೆ 11:30 ರಿಂದ 3:30 ಹೊತ್ತಲ್ಲಿ ಬಿಸಿಲಿನಲ್ಲಿ ಓಡಾಡುವುದನ್ನು ಕಡಿಮೆ ಮಾಡಬೇಕೆಂದು ಹೇಳಲಾಗಿದೆ.
ಚಂಡಮಾರುತ ತೇವಾಂಶ ಭರಿತ ಮೋಡಗಳನ್ನು ಸೆಳೆದಿದ್ದು, ಗಾಳಿಯ ವೇಗ ಇಲ್ಲದಂತಾಗಿದೆ. ವಾತಾವರಣದಲ್ಲಿ ತೇವಾಂಶ ಕೊರತೆ ಕಂಡುಬಂದಿದ್ದು ರಾಜ್ಯದಲ್ಲಿ ಬಿಸಿಲ ಝಳ ಭಾರಿ ಹೆಚ್ಚಾಗಿದೆ.