ಬೆಂಗಳೂರು: ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಬಿಸಿ ಗಾಳಿಯಿಂದ ಜನ ತತ್ತರಿಸಿದ್ದಾರೆ. ಕಳೆದ ವಾರ ಚಂಡಮಾರುತ ಉಂಟಾಗಿ ತೇವಾಂಶ ಭರಿತ ಮೋಡಗಳ ಸೆಳೆತ ಮತ್ತು ಗಾಳಿಯ ವೇಗ ಇಲ್ಲದ ಕಾರಣದಿಂದ ವಾತಾವರಣದಲ್ಲಿ ತೇವಾಂಶ ಕೊರತೆ ಉಂಟಾಗಿದೆ.
ಬಿಸಿಲಿನ ಬೇಗೆ ಜೊತೆಗೆ ಬಿಸಿ ಗಾಳಿ ಆತಂಕ ಎದುರಾಗಿದೆ. ಬಿಸಿಲ ಬೇಗೆಯಿಂದ ತತ್ತರಿಸಿದ ಜನರಿಗೆ ಹೆಚ್ಚು ಸೆಖೆ ಕಾಣಿಸಿಕೊಳ್ಳುತ್ತಿದೆ. ಅನೇಕ ರಾಜ್ಯಗಳಲ್ಲಿ ತಾಪಮಾನ ಹೆಚ್ಚಳದ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಉಷ್ಣಾಂಶ ತೀವ್ರ ಏರಿಕೆ ಕಂಡಿದ್ದು, ಜನ ಹೈರಾಣಾಗಿದ್ದಾರೆ. ಕಲಬುರ್ಗಿ, ಧಾರವಾಡ, ಗದಗ, ರಾಯಚೂರು ಜಿಲ್ಲೆಗಳಲ್ಲಿ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್ ಗಡಿ ದಾಟಿದೆ.
ಇದೇ ವೇಳೆ ರಾಜ್ಯದಲ್ಲಿ ಮೇ 19 ರಿಂದ ಮೂರು ದಿನ ಗುಡುಗು ಮಿಂಚು ಸಹಿತ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ರಾಮನಗರ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಕೊಡಗು, ಕೋಲಾರ, ತುಮಕೂರು, ಚಾಮರಾಜನಗರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಮೇ 19, 20 ರಂದು ಮಳೆ ಆಗಲಿದೆ. ಕರಾವಳಿಯ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳ ಹಲವೆಡೆ ಮುಂದಿನ 48 ಗಂಟೆಗಳ ಕಾಲ ಸಾಧಾರಣ ಮಳೆ ಆಗಲಿದ್ದು, ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳ ವ್ಯಾಪ್ತಿಯಲ್ಲಿ ಒಣಹವೆ ಇರುತ್ತದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.